ತಮ್ಮ 15 ಲಕ್ಷ ರೂಪಾಯಿಯ ಬಟ್ಟೆ ಕೊಳೆಯಾಗುತ್ತದೆ ಎಂಬ ಆತಂಕದಿಂದ ಪ್ರಧಾನಿ ಮೋದಿ ಅವರು ರೈತರನ್ನು ಭೇಟಿಯಾಗುವುದಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ಸೂಟ್ ವಿಷಯವನ್ನಿಟ್ಟುಕೊಂಡು ಕುಹಕವಾಡಿದರು. ತನ್ನ ಸೂಟ್ ಕೊಳೆಯಾಗಬಾರೆಂದು ಪ್ರಧಾನಿ ಕೃಷಿಕರನ್ನು ಭೇಟಿಯಾಗುವುದಿಲ್ಲ. ಅಮೇರಿಕಾ ಮತ್ತು ಚೀನಾಕ್ಕೆ ಪ್ರವಾಸ ಕೈಗೊಳ್ಳುವುದನ್ನು ಮಾತ್ರ ಅವರು ಇಷ್ಟಪಡುತ್ತಾರೆ ಎಂದು ಜರಿದಿದ್ದಾರೆ.
ಕಳೆದ ವರ್ಷ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾರನ್ನು ಭೇಟಿಯಾಗುವಾಗ ಪ್ರಧಾನಿ ಮೋದಿ ಧರಿಸಿದ್ದ ದುಬಾರಿ ಸೂಟ್ ಬಹಳ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಸೂರತ್‌ನ ವಜ್ರದ ವ್ಯಾಪಾರಿಯೋರ್ವರು ಇತ್ತೀಚಿಗೆ ಅದನ್ನು 4.31ಕೋಟಿ ರೂಪಾಯಿಗೆ ಖರೀದಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಕಳೆದೊಂದು ವಾರದಿಂದ ಕಿಸಾನ್ ಯಾತ್ರೆ, ಚುನಾವಣಾ ಪ್ರಚಾರದಲ್ಲಿ ತೊಡಗಿರುವ ರಾಹುಲ್ ಗಾಂಧಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ವಿರುದ್ಧ ಕೂಡ ಕಿಡಿಕಾರಿದ್ದರು. ಆನೆ( ಬಿಎಸ್‌ಪಿ ಚುನಾವಣಾ ಚಿಹ್ನೆ) ಎಲ್ಲ ಹಣವನ್ನು ತಿಂದುಹಾಕಿದರೆ, ಸೈಕಲ್ ( ಸಮಾಜವಾದಿ ಚುನಾವಣಾ ಚಿಹ್ನೆ) ಪಂಕ್ಚರ್ ಆಗಿ ನಿಂತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
'ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳೆರಡು ನಿಮಗೆ ವಂಚನೆ ಮಾಡಿದ್ದು, ನೀವೀಗ 'ಕೈ' ಕುರಿತು ಯೋಚಿಸಬೇಕಾದ ಸಮಯ ಬಂದಿದೆ. ಆ ಬಳಿಕ ಪಡಿತರಚೀಟಿ ಮತ್ತು ರೈತರಿಗಾಗಿ ನಾವೇನು ಮಾಡುತ್ತೇವೆ ಎಂದು ನೋಡಿ ', ಎನ್ನುವುದರ ಮೂಲಕ ಅವರು ಮತದಾರರನ್ನು ಓಲೈಸಲು ಪ್ರಯತ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.