Select Your Language

Notifications

webdunia
webdunia
webdunia
webdunia

ರಾಹುಲ್‌ ಗಾಂಧಿಗೆ 3ನೇ ದಿನವೂ ಇಡಿ ಡ್ರಿಲ್!

ರಾಹುಲ್‌ ಗಾಂಧಿಗೆ 3ನೇ ದಿನವೂ ಇಡಿ ಡ್ರಿಲ್!
bengaluru , ಬುಧವಾರ, 15 ಜೂನ್ 2022 (15:03 IST)
ನ್ಯಾಷನಲ್​​ ಹೆರಾಲ್ಡ್​​ ಪತ್ರಿಕೆ ಖರೀದಿ ಅವ್ಯವಹಾರ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಎದುರು ಸತತ ಮೂರನೇ ದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿದ್ದಾರೆ.
ಇಂದು ಬೆಳಿಗ್ಗೆ 11.35ಕ್ಕೆ ರಾಹುಲ್ ಗಾಂಧಿ ಅವರು ತಮ್ಮ Z+ ವರ್ಗದ ಸಿಆರ್​ಪಿಎಫ್​ ಭದ್ರತಾ ಬೆಂಗಾವಲಿನೊಂದಿಗೆ ನವದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಗೆ ವಿಚಾರಣೆಗ ಹಾಜರಾದರು. ಈ ವೇಳೆ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ರಾಹುಲ್ ಗಾಂಧಿ ಅವರಿಗೆ ಸಾಥ್ ನೀಡಿದರು.
ರಾಹುಲ್ ಗಾಂಧಿ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಂತೆಯೇ ಇತ್ತ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ತೀವ್ರ  ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಇಡಿ ಕೈಗೊಂಡಿರುವ ಕ್ರಮದ ವಿರುದ್ಧ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಯವರು, ನಾವೇನು ಭಯೋತ್ಪಾದಕರೇ? ನಮ್ಮ ಬಗ್ಗೆ ಭಯ ಏಕೆ? ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸ್ ಬಲ ಏಕೆ ಬಳಕೆ ಮಾಡುತ್ತಿದ್ದಾರೆ? ಎಂದು ಕಿಡಿಕಾರಿದರು.
ಕೇಂದ್ರ ದೆಹಲಿಯ ಅಕ್ಬರ್ ರಸ್ತೆಯಲ್ಲಿ ಇರುವ ಕಾಂಗ್ರೆಸ್ ಕಚೇರಿ ಎದುರು ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಸೇರಿದ್ದಾರೆ. ಈ ನಡುವೆ ಪೊಲೀಸರು ಪ್ರತಿಭಟನಾ ನಿರತ ಹಲವು ನಾಯಕರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.
ಹಲವರನ್ನು ಪೊಲೀಸು ವಶಕ್ಕೆ ಪಡೆದಿದ್ದರೂ ಪ್ರತಿಭಟನೆ ಮುಂದುವರೆದಿದೆ. ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆಯುವಾಗ ಹಲವರು ರಾಹುಲ್ ಗಾಂಧಿ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನ್ನೆ ಕೂಡ ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾಹುಲ್ ಗಾಂಧಿಯವರನ್ನು 11 ಗಂಟೆಗಳ ಕಾಲ ವಿಚಾರಣೆ ನಡೆಸಿ, ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು. ವಿಚಾರಣೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಇದರಂತೆ ಇಂದು ರಾಹುಲ್ ಗಾಂಧಿಯವರು ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ !