ನವದೆಹಲಿ: ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತಾದ ಭಾಷಣಕ್ಕೆ ಪ್ರತಿಕ್ರಿಯೆ ನೀಡುವಾಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಾಡಿದ ಕಾಮೆಂಟ್ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಸ್ಪಷ್ಟನೆ ನಿಡಿರುವ ಮಗಳು, ಸಂಸದೆ ಪ್ರಿಯಾಂಕ ಗಾಂಧಿ ಅಮ್ಮನಿಗೂ ವಯಸ್ಸಾಗಿದೆ ಎಂದಿದ್ದಾರೆ.
ನಿನ್ನೆ ಬಜೆಟ್ ಗೆ ಮುನ್ನ ಸಂಪ್ರದಾಯದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ ನ್ನುದ್ದೇಶಿಸಿ ಭಾಷಣ ಮಾಡಿದ್ದರು. ರಾಷ್ಟ್ರಪತಿಗಳ ಭಾಷಣದ ಬಗ್ಗೆ ಸಂಸತ್ ನ ಹೊರಾವರಣದಲ್ಲಿ ಮಾಧ್ಯಮಗಳು ಸೋನಿಯಾ ಗಾಂಧಿಯವರ ಬಳಿ ಅಭಿಪ್ರಾಯ ಕೇಳಿದ್ದರು.
ಆಗ ಸೋನಿಯಾ ಗಾಂಧಿ ಬಹುಶಃ ರಾಷ್ಟ್ರಪತಿಗಳು ಸರ್ಕಾರದ ಸುಳ್ಳುಗಳನ್ನೇ ಹೇಳಿ ಸಾಕಷ್ಟು ದಣಿದಿದ್ದಾರೆ ಅನಿಸುತ್ತದೆ. ಪೂರ್ ಲೇಡಿ ಎಂದಿದ್ದರು. ಅವರ ಈ ಮಾತುಗಳ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕಿಡಿಕಾರಿದ್ದರು. ಸೋನಿಯಾ ರಾಷ್ಟ್ರಪತಿಗಳಿಗೇ ಅವಮಾನ ಮಾಡಿದ್ದಾರೆ ಎಂದು ವಿವಾದವಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಿಯಾಂಕ ಗಾಂಧಿ ನನ್ನ ಅಮ್ಮನಿಗೂ ವಯಸ್ಸಾಗಿದೆ. ಅವರಿಗೆ ಈಗ 78 ವರ್ಷ. ಹೀಗಾಗಿ ರಾಷ್ಟ್ರಪತಿಗಳ ಮೇಲಿನ ಕಾಳಜಿಯಿಂದ ಇವರು ಇಷ್ಟು ಸುದೀರ್ಘ ಭಾಷಣವನ್ನು ಓದಿ ಸುಸ್ತಾಗಿರಬಹುದು ಅಯ್ಯೋ ಪಾಪ ಎಂದಿರಬಹುದು. ಹೊರತಾಗಿ ಅವರಿಗೆ ಅವಮಾನ ಮಾಡುವ ಉದ್ದೇಶವಿರಲಿಲ್ಲ. ಮಾಧ್ಯಮಗಳು ಅಮ್ಮನ ಹೇಳಿಕೆಯನ್ನು ತಿರುಚಿವೆ ಎಂದು ಪ್ರಿಯಾಂಕ ತೇಪೆ ಹಾಕಿದ್ದಾರೆ.