ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ಫೆಂಗಲ್ ಚಂಡಮಾರುತ ತಮಿಳುನಾಡಿನತ್ತ ಧಾವಿಸಿದೆ. ಹೀಗಾಗಿ, ತಮಿಳುನಾಡು ಕರಾವಳಿಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ.
ಕೆಲವೇ ಗಂಟೆಗಳಲ್ಲಿ ತಮಿಳುನಾಡು ಕರಾವಳಿಗೆ ಫೆಂಗಲ್ ಚಂಡಮಾರುತ ಅಪ್ಪಳಿಸಲಿದೆ. ತಮಿಳುನಾಡಿನಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯು ತಮಿಳುನಾಡು ಮತ್ತು ಪುದುಚೇರಿಯ ಹಲವು ಭಾಗಗಳಿಗೆ ಹವಾಮಾನ ಎಚ್ಚರಿಕೆ ನೀಡಿದೆ. ತಮಿಳುನಾಡು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂದಿನ ನಾಲ್ಕೈದು ದಿನಗಳಲ್ಲಿ ಭಾರೀ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆ ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಇಂದು ಅಂದರೆ ನ.26 ರಂದು ಇತರ ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ. ನ.27 ರಂದು ತಮಿಳುನಾಡಿನ ಎರಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಹವಾಮಾನ ಇಲಾಖೆ ಮೂಲಗಳ ಪ್ರಕಾರ ನವೆಂಬರ್ 27 ರಂದು ಚಂಡಮಾರುತದ ಚಂಡಮಾರುತವಾಗಿ ತೀವ್ರಗೊಳ್ಳಲಿದ್ದು, ನಂತರ ಇದು ಉತ್ತರ-ವಾಯುವ್ಯದ ಕಡೆಗೆ ತಮಿಳುನಾಡು ಕರಾವಳಿಯ ಕಡೆಗೆ ಚಲಿಸುತ್ತದೆ. ನಂತರದ 2 ದಿನಗಳಲ್ಲಿ ಶ್ರೀಲಂಕಾ ಕರಾವಳಿಯಲ್ಲೂ ಮಳೆಯಾಗಲಿದೆ. ನವೆಂಬರ್ 26 ಮತ್ತು 27 ರಂದು ತಮಿಳುನಾಡು ಮತ್ತು ಪುದುಚೇರಿಯ ಹಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ.
ಆಂಧ್ರಪ್ರದೇಶಕ್ಕೆ ಮಳೆಯ ಎಚ್ಚರಿಕೆಯನ್ನು ಸಹ ನೀಡಲಾಗಿದ್ದು, ನವೆಂಬರ್ 26 ರಿಂದ 29 ನಡುವೆ ಮಳೆಯಾಗಲಿದೆ. ನಾಗಪಟ್ಟಣಂ, ತಿರುವರೂರ್ ಮತ್ತು ಮೈಲಾಡುತುರೈ ಜಿಲ್ಲೆಗಳಿಗೆ ಮತ್ತು ಕಾರೈಕಲ್ ಪ್ರದೇಶಕ್ಕೆ ನ.26 ರಂದು ಐಎಂಡಿ ರೆಡ್ ಅಲರ್ಟ್ ಘೋಷಿಸಿದ್ದು, ಈ ನಾಲ್ಕು ಜಿಲ್ಲೆಗಳಲ್ಲಿ ಹಲವೆಡೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
ನ.27ಕ್ಕೆ ಮೈಲಾಡುತುರೈ, ಕಡಲೂರು ಮತ್ತು ಕಾರೈಕಲ್ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚೆಂಗಲ್ಪಟ್ಟು, ವಿಲ್ಲುಪುರಂ, ಕಡಲೂರು, ಪುದುಕೊಟ್ಟೈ, ಅರಿಯಲೂರು, ತಂಜಾವೂರು, ಕಡಲೂರು ಮತ್ತು ಶಿವಗಂಗೈ ಮತ್ತು ರಾಮನಾಥಪುರದಲ್ಲಿ ನ.26 ರಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಚೆಂಗಲ್ಪಟ್ಟು, ವಿಲ್ಲುಪುರಂ, ಅರಿಯಲೂರು, ತಂಜಾವೂರು, ತಿರುವರೂರು, ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ನ.27 ರಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ತಮಿಳುನಾಡು ಮಾತ್ರವಲ್ಲದೇ ನೆರೆಯ ಕರ್ನಾಟಕದಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಂಡಮಾರುತ ಪರಿಣಾಮ ಬೆಂಗಳೂರಿನ ಮೇಲೂ ಗೋಚರಿಸಲಿದ್ದು, ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.