ವಜಾಗೊಂಡ ಸಚಿವ ಸಂದೀಪ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ ಮುಖ್ಯ ಮೌಲ್ಯಗಳಿಗೆ ಕುಮಾರ್ ವಂಚನೆ ಮಾಡಿದ್ದಾರೆಂದು ಟೀಕಿಸಿದರು.
ತನ್ನ ಮೌಲ್ಯಗಳ ಜತೆ ಎಎಪಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಪಾದಿಸಿದ ಅವರು ಭ್ರಷ್ಟಾಚಾರ ಮತ್ತು ತಪ್ಪುಎಸಗಿದವರ ವಿರುದ್ಧ ಕ್ರಮಕ್ಕೆ ಉದಾಸೀನ ತೋರುವ ಎದುರಾಳಿ ಪಕ್ಷಗಳನ್ನು ಅವರು ಟೀಕಿಸಿದರು.
ಎಎಪಿಯ ತತ್ವಗಳಿಂದ ದೂರವುಳಿಯುವ ಬದಲಿಗೆ ತಾನು ಸಾವಿಗೆ ಆದ್ಯತೆ ನೀಡುವುದಾಗಿ ವಿಡಿಯೊ ಸಂದೇಶದಲ್ಲಿ ತಿಳಿಸಿದ ಕೇಜ್ರಿವಾಲ್, ಇದೇ ನಿಯಮ ತಮಗಲ್ಲದೇ ಪಕ್ಷದ ಇತರೆ ಹಿರಿಯ ನಾಯಕರಿಗೂ ಅನ್ವಯಿಸುತ್ತದೆಂದು ತಿಳಿಸಿದರು.
ಸಂದೀಪ್ ಕುಮಾರ್ ಪಕ್ಷಕ್ಕೆ ವಂಚಿಸಿದರು. ಎಎಪಿ ಅಭಿಯಾನಕ್ಕೆ ಮತ್ತು ಜನರು ಎಎಪಿ ಮೇಲೆ ಇರಿಸಿದ್ದ ನಂಬಿಕೆಗೆ ವಂಚನೆ ಮಾಡಿದರು ಎಂದು ಕೇಜ್ರಿವಾಲ್ ನೋವಿನಿಂದ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಗಳನ್ನು ಹೊಂದಿದ್ದ ಕುಮಾರ್ ಮಹಿಳೆಯ ಜತೆ ಆಕ್ಷೇಪಾರ್ಹ ಭಂಗಿಯಲ್ಲಿದ್ದ ಸಿಡಿಯನ್ನು ಕೇಜ್ರಿವಾಲ್ ಸ್ವೀಕರಿಸಿದ ಮೇಲೆ ಸಚಿವ ಸ್ಥಾನದಿಂದ ಕುಮಾರ್ ಅವರನ್ನು ವಜಾ ಮಾಡಿದ್ದರು.