Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ವರ್ಸಸ್ ಪ್ರಧಾನಿ ಮೋದಿ: ಲೋಕಸಭೆ ಚುನಾವಣೆಗೆ ಯಾರು ಹೆಚ್ಚು ಸಮಾವೇಶ ಮಾಡಿದರು

Modi-Rahul Gandhi

Krishnaveni K

ಬೆಂಗಳೂರು , ಶನಿವಾರ, 11 ಮೇ 2024 (09:20 IST)
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಪಕ್ಷದ ನಾಯಕರೂ ದೇಶದ ವಿವಿಧೆಡೆ ಸಂಚರಿಸಿ ಸಾಕಷ್ಟು ಪ್ರಚಾರ ರಾಲಿಗಳನ್ನು ಮಾಡಿದ್ದಾರೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಒಟ್ಟು ಎಷ್ಟು ಪ್ರಚಾರ ಸಮಾವೇಶಗಳನ್ನು ಮಾಡಿದರು ಎಂಬ ಅಂಕಿ ಅಂಶ ಇಲ್ಲಿದೆ.

ಇಂದಿನವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅನೇಕ ಸಮಾವೇಶ, ರೋಡ್ ಶೋಗಳನ್ನು ನಡೆಸಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಈ ಪೈಕಿ ಇಬ್ಬರ ವಿರುದ್ಧವೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.

ಪ್ರಧಾನಿ ಮೋದಿ ಅಂಬಾನಿ, ಅದಾನಿ ಹೆಸರೆತ್ತಿ ತಮ್ಮನ್ನು ಟೀಕಿಸುವ ರಾಹುಲ್ ಗಾಂಧಿಗೆ ಅವರದೇ ಹೆಸರಿನಲ್ಲಿ ತಿರುಗೇಟು ನೀಡಿದ್ದಾರೆ. ಅಂಬಾನಿ, ಅದಾನಿಯಿಂದ ಕಾಂಗ್ರೆಸ್ ಹಣ ಪಡೆದಿರಬೇಕು. ಇದಕ್ಕೇ ಇತ್ತೀಚೆಗೆ ರಾಹುಲ್ ಈ ಇಬ್ಬರು ಉದ್ಯಮಿಗಳ ಹೆಸರು ಹೇಳಿಕೊಂಡು ಬಿಜೆಪಿಯನ್ನು ಟೀಕಿಸುತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದರು. ಇದಕ್ಕೆ ರಾಹುಲ್ ಕೂಡಾ ತಿರುಗೇಟು ನೀಡಿದ್ದು, ಮೋದಿ ತಾವು ಮಾಡಿದ್ದ ಅಪರಾಧವನ್ನು ಕಾಂಗ್ರೆಸ್ ಮೇಲೆ ಹಾಕುತ್ತಿದ್ದಾರೆ ಎಂದಿದ್ದಾರೆ. ಈಗಲೂ ಉತ್ತರ ಭಾರತದ ಕೆಲವೆಡೆ ಲೋಕಸಭೆ ಚುನಾವಣೆ ನಡೆಯಲು ಬಾಕಿಯಿದ್ದು, ನಾಯಕರ ಸಮಾವೇಶಗಳು, ಆರೋಪಗಳು ಮುಂದುವರಿದಿವೆ.

ಈ ಪೈಕಿ ಪ್ರಧಾನಿ ಮೋದಿ ಸಮಾವೇಶಗಳ ಪಟ್ಟಿಯಲ್ಲಿ ರಾಹುಲ್ ಗಾಂಧಿಗಿಂತ ಮುಂದಿದ್ದಾರೆ. ಮೋದಿ ಇದುವರೆಗೆ 110 ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರೆ ರಾಹುಲ್ ಕೇವಲ 39 ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ. ಮೋದಿ 28 ರೋಡ್ ಶೋಗಳಲ್ಲಿ ಭಾಗಿಯಾಗಿದ್ದರೆ ಭಾರತ್ ನ್ಯಾಯ್ ಝೋಡೋ ಯಾತ್ರೆ ಹೊರತುಪಡಿಸಿ ರಾಹುಲ್ ಗಾಂಧಿ 2 ರೋಡ್ ಶೋ ನಡೆಸಿದ್ದಾರೆ. ಇದುವರೆಗೆ ರಾಹುಲ್ ಗಾಂಧಿ ಚುನಾವಣೆ ಬ್ಯುಸಿ ವೇಳಾಪಟ್ಟಿಯ ನಡುವೆಯೂ ಅನಾರೋಗ್ಯದ ನಿಮಿತ್ತ 5 ದಿನ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಮೋದಿ ಇದುವರೆಗೆ ಬ್ರೇಕ್ ಪಡೆದಿಲ್ಲ.

ಮೋದಿ ಮಾಧ್ಯಮಗಳಿಗೆ ಸಂದರ್ಶನ ನೀಡುವುದಿಲ್ಲ ಎಂಬುದು ಕಾಂಗ್ರೆಸ್ ಆರೋಪವಾಗಿತ್ತು. ಆದರೆ ಅದೆಲ್ಲಾ ತೊಡೆದು ಹಾಕುವಂತೆ ಈ ಬಾರಿ ಮೋದಿ ಚುನಾವಣೆ ಸಂದರ್ಭದಲ್ಲಿ ಒಟ್ಟು 26 ಒನ್ ಟು ಒನ್ ಸಂದರ್ಶನ ನೀಡಿದ್ದಾರೆ. ಇದರಲ್ಲಿ 12 ಪ್ರಾದೇಶಿಕ, 13 ರಾಷ್ಟ್ರೀಯ ಮತ್ತು 1 ಅಂತಾರಾಷ್ಟ್ರೀಯ ಮಾಧ‍್ಯಮ ಸೇರಿದೆ. ಆದರೆ ರಾಹುಲ್ ಗಾಂಧಿ ಇದುವರೆಗೆ ಮಾಧ‍್ಯಮಗಳಿಗೆ ಸಂದರ್ಶನ ನೀಡಿಲ್ಲ. ಲೋಕಸಭೆ ಚುನಾವಣೆ ಜಾರಿಯಲ್ಲಿರುವುದರಿಂದ ಈ ಸಮಾವೇಶಗಳು ಇನ್ನೂ ಮುಂದುವರಿಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ