Publish Date: Wed, 10 Jun 2026 (20:58 IST)
Updated Date: Wed, 10 Jun 2026 (21:00 IST)
ನವದೆಹಲಿ: ದೇಶದ ಚುನಾಯಿತ ಪ್ರಧಾನಿಯಾಗಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ದಾಖಲೆ ಮಾಡಿದ ಹಿನ್ನಲೆಯಲ್ಲಿ ಇಂದು ಎನ್ ಡಿಎ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಇಂತಹದ್ದೊಂದು ದಿನ ಬರುತ್ತೆ ಅಂದುಕೊಂಡೇ ಇರಲಿಲ್ಲ. ಇಷ್ಟು ಸುದೀರ್ಘ ಅವಧಿಯವರೆಗೆ ಭಾರತಾಂಬೆಯ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ದೇವರ ಆಶೀರ್ವಾದ ಎಂದಿದ್ದಾರೆ.
ಈ ಸಾಧನೆ ಕೇವಲ ಏಕ ವ್ಯಕ್ತಿಯದ್ದಲ್ಲ. ಇದರಲ್ಲಿ ನೀವು ಮತ್ತು ನಿಮ್ಮಂತಹ ಹಲವು ಜನರ ಸೇವೆಯಿದೆ. ಅವರೆಲ್ಲರಿಗೂ ನಾನು ಈವತ್ತು ಧನ್ಯವಾದ ಸಲ್ಲಿಸುತ್ತೇನೆ. ಇದು ನನ್ನೊಬ್ಬನ ಸಾಧನೆ ಎಂದು ಹೇಳಿಕೊಳ್ಳಲು ಇಷ್ಟಪಡಲ್ಲ. ಇದು ಎನ್ ಡಿಎದ ಘಟಕ ಪಕ್ಷಗಳ ಸಮಾನ ಕೊಡುಗೆಯಿದೆ. ಹೀಗಾಗಿ ಈ ಸಾಧನೆಯನ್ನು ನಾವು ಎನ್ ಡಿಎ ಪಕ್ಷಗಳ ಎಲ್ಲಾ ಕಾರ್ಯಕರ್ತರಿಗೆ ಸಮರ್ಪಿಸುತ್ತೇನೆ.
ದೇಶದ ಜನ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಸ್ಥಿರತೆಯನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಜನರ ಆಶೀರ್ವಾದದಿಂದ ನನಗೆ ಇಷ್ಟು ಸುದೀರ್ಘ ಅವಧಿಯವರೆಗೆ ಆಡಳಿತ ನಡೆಸಲು ಅವಕಾಶ ಸಿಕ್ಕಿದೆ. 2014 ಕ್ಕಿಂತ ಮೊದಲು ಸಾಕಷ್ಟು ಏರುಪೇರುಗಳಿದ್ದವು. ಇದರಿಂದ ಜನರು ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು.
ಇಂದು ದೇಶದ ಮಹಾನ್ ಜನರಿಗೆ ನಮಸ್ಕಾರ ಸಲ್ಲಿಸಲು ಬಯಸುತ್ತೇನೆ. 2014 ರಲ್ಲಿ ಎನ್ ಡಿಎ ಗೆದ್ದಾಗ ಆಗ ನಾನು ಹೇಳಿದ್ದೆ, ಇಂದು ದೇಶದ ಸಾಮಾನ್ಯ ನಾಗರಿಕರಲ್ಲಿ ಹೊಸ ಆಶಾಭಾವನೆ ಉದಯವಾಗಿದೆ. ಆ ಆಶಾಭಾವನೆಯನ್ನು ಕಾಪಾಡುವುದು ನಮ್ಮ ದೊಡ್ಡ ಜವಾಬ್ಧಾರಿಯಾಗಿತ್ತು.
ಕಾಂಗ್ರೆಸ್ ನ ವಿಶ್ವಾಸಘಾತುಕತೆಯ ನಂತರ ದೇಶದ ಜನರು ನಮ್ಮ ಮೇಲೆ ವಿಶ್ವಾಸವಿಟ್ಟಿದ್ದರು. ಇಂದು ಎನ್ ಡಿಎ ಮೈತ್ರಿಕೂಟ ಜನರ ಭರವಸೆಯನ್ನು ಮತ್ತಷ್ಟು ದೃಢಗೊಳಿಸಿದೆ. ಸರ್ಕಾರ ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ವೇಗವಾಗಿ ಕೆಲಸವೂ ಆಗುತ್ತದೆ ಎಂಬುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ.
ಭಾರತದ ಯುವ, ನಾರಿಶಕ್ತಿ, ಕೃಷಿಕರು, ಮಧ್ಯಮ ವರ್ಗದವರ ಆಕಾಂಕ್ಷೆಗಳನ್ನು ನಾವು ಪೂರ್ತಿ ಮಾಡಬೇಕು. ಇಂದು ದೇಶದ ಪ್ರತೀ ನಾಗರಿಕರು ವಿಕಸಿತ ಭಾರತದ ಭರವಸೆಯಲ್ಲಿದ್ದಾರೆ. ಇದು ವಿಕಸಿತ ಭರವಸೆ ಕೇವಲ ಒಂದು ಸರ್ಕಾರ ಅಥವಾ ಪಕ್ಷದ್ದಲ್ಲ. ಇದು ದೇಶದ ಸಂಕಲ್ಪವಾಗಿದೆ. ಈ ಕನಸು ಪೂರ್ತಿಗೊಳಿಸಲು ನಮ್ಮ ಸರ್ವಸ್ವವನ್ನೂ ಧಾರೆ ಎರೆಯಬೇಕಿದೆ.
ಕಾಂಗ್ರೆಸ್ ಸರ್ಕಾರವಿದ್ದಾಗ ಅಭಿವೃದ್ಧಿ ಎನ್ನುವುದು ಮಂದಗತಿಯಲ್ಲಿ ಸಾಗುತ್ತದೆ ಎಂದು ಜನ ಅಂದುಕೊಂಡಿದ್ದರು. ಆದರೆ ಜನರು ಆ ಭಾವನೆಯಿಂದ ಇಂದು ಹೊರಬಂದಿದ್ದಾರೆ. ಮೊದಲ ಬಾರಿಗೆ ಅಟಲ್ ಜೀ ನೇತೃತ್ವದಲ್ಲಿ ಎನ್ ಡಿಎ ಸರ್ಕಾರ ಬಂದಾಗ ಅಭಿವೃದ್ಧಿ ಎಂಬುದು ಹೇಗೆ ಎಂಬ ಝಲಕ್ ಜನ ನೋಡಿದರು. ಆದರೆ ಮತ್ತೆ ದುರದೃಷ್ಟವಶಾತ್ ಮತ್ತೆ ಕಾಂಗ್ರೆಸ್ ಸರ್ಕಾರ ಬಂತು.
2014 ರಲ್ಲಿ ಎನ್ ಡಿಎ ಸರ್ಕಾರ ಬಂದಾಗ ಮತ್ತೆ ದೇಶದ ಸೌಭಾಗ್ಯ ಆರಂಭವಾಯಿತು. ನೀತಿ, ನಿಯಮ ಮತ್ತು ನಿರ್ಣಯ ಮೂರೂ ಒಂದೇ ಸಮಯಕ್ಕೆ ಕೆಲಸ ಮಾಡುವಾಗ ಅಭಿವೃದ್ಧಿ ವೇಗವಾಗುತ್ತದೆ. ಅದನ್ನು ದೇಶ ಈಗ ನೋಡುತ್ತಿದೆ.
2014 ರಲ್ಲಿ 72 ವಿಮಾನ ನಿಲ್ದಾಣಗಳಿದ್ದವು, ಈಗ 108 ಕ್ಕೂ ಹೆಚ್ಚು ನಿಲ್ದಾಣಗಳಿವೆ. 2014 ರಲ್ಲಿ ಡಿಜಿಟಲ್ ಪೇಮೆಂಟ್ ಇರಲೇ ಇಲ್ಲ. ಈಗ ನಾವು ಆ ನಿಟ್ಟಿನಲ್ಲಿ ಕ್ರಾಂತಿ ಮಾಡಿದ್ದೇವೆ. 2014 ರಲ್ಲಿ ದೇಶದಲ್ಲಿ ಒಂದೇ ಸೆಮಿಕಂಡಕ್ಟರ್ ಇರಲಿಲ್ಲ. ಇಂದು 10 ಕ್ಕೂ ಹೆಚ್ಚು ಸೆಮಿಕಂಡಕ್ಟರ್ ಗಳಿವೆ. ನಾವು ಯುವಜನರಿಗಾಗಿ ಸ್ಕಿಲ್ ಡೆವಲಪ್ ಮೆಂಟ್ ಸಚಿವಾಲಯ ಆರಂಭಿಸಿದೆವು. ನಾವು ದಿವ್ಯಾಂಗರಿಗಾಗಿ, ಆದಿವಾಸಿಗಳಿಗಾಗಿ, ಪಶು ಪಾಲಕರಿಗೆ ಹೊಸ ಯೋಜನೆಗಳನ್ನು ಜಾರಿಗೆ ತಂದೆವು. 12 ವರ್ಷಗಳಲ್ಲಿ ನಾವು ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರೆ ಕಾಂಗ್ರೆಸ್ ಅಷ್ಟೊಂದು ವರ್ಷ ಆಡಳಿತ ಮಾಡಿದ್ದಾಗ ಯಾಕೆ ಸಾಧ್ಯವಾಗಲಿಲ್ಲ ಎಂದು ನೀವೇ ಯೋಚಿಸಿ.
ಭಾರತ ಇಂದು ದೊಡ್ಡ ಗುರಿಯ ಕಡೆಗೆ ಸಾಗುತ್ತಿದೆ. ಈ ಗುರಿಯ ಕಡೆಗೆ ಸಾಗಲು ಶ್ರಮ ಮತ್ತು ಯೋಜನೆಯೊಂದಿಗೆ ಸಾಗುತ್ತಿದ್ದೇವೆ. ಒಂದು ಸ್ಥಿರ ಸರ್ಕಾರವಿದ್ದರೆ ಏನು ಪ್ರಯೋಜನವಾಗುತ್ತದೆ ಎಂಬುದಕ್ಕೆ ನಾವು ಇಂದು ಉದಾಹರಣೆಯಾಗಿದ್ದೇವೆ. ಕೊರೋನಾ ಬಂದಾಗ ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳೂ ಎಷ್ಟು ಸಂಕಷ್ಟ ಅನುಭವಿಸಿದವು ಎಂದು ನಾವು ನೋಡಿದ್ದೇವೆ. ಆದರೂ ನಾವು ಅದನ್ನು ಮೀರಿ ಬೆಳೆದಿದ್ದೇವೆ. ಈಗಲೂ ದೊಡ್ಡ ದೊಡ್ಡ ರಾಷ್ಟ್ರಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಆದರೂ ನಾವು ಆರ್ಥಿಕತೆಯಲ್ಲಿ 7.2% ಬೆಳವಣಿಗೆ ಕಂಡಿದ್ದೇವೆ.
2014 ಕ್ಕಿಂತ ಮೊದಲು ಜನ ಅಸಮರ್ಪಕ ತೆರಿಗೆಯಿಂದಾಗಿ ಹೆಣಗಾಡುತ್ತಿದ್ದರು. ಮಧ್ಯಮ ವರ್ಗದವರು ಸಂಕಷ್ಟದಲ್ಲಿದ್ದರು. ಆದರೆ ಈಗ ನಾವು ತೆರಿಗೆ ಸಮರ್ಪಕಗೊಳಿಸಿದ ಮೇಲೆ ಮಧ್ಯಮ ವರ್ಗ ನೆಮ್ಮದಿಯಾಗಿದೆ. ಜಿಎಸ್ ಟಿ ಸುಧಾರಣೆಯ ಬಹುದೊಡ್ಡ ಲಾಭ ಮಧ್ಯಮ ವರ್ಗದವರ ಮೇಲಾಗಿದೆ. ಅವರ ಆರೋಗ್ಯ ವಿಮೆ ಈಗ ಅಗ್ಗವಾಗಿದೆ. ದೇಶದ ಮಧ್ಯಮ ವರ್ಗ ಅನಿಶ್ಚಿತತೆಯಿಂದ ಮುಕ್ತವಾಗಿದೆ.
ನಮಗೆ ನಮ್ಮ ಪಕ್ಷಕ್ಕಿಂತ ದೇಶ ದೊಡ್ಡದು. ದೇಶ ಮೊದಲು ಎಂಬ ಭಾವನೆಯಲ್ಲಿ ಕೆಲಸ ಮಾಡುವಾಗ ಯಾವುದೇ ನಿರ್ಣಯ ಕೈಗೊಳ್ಳುವುದು ಕಷ್ಟವಾಗಲ್ಲ. ದೇಶದ ಸುರಕ್ಷತೆಗೆ ಅಗತ್ಯವಾದ ಕಠಿಣ ನಿರ್ಣಯಗಳನ್ನು ಕೈಗೊಂಡಿದ್ದೇವೆ. 370 ಆರ್ಟಿಕಲ್ ರದ್ದು ಮಾಡಲು ಹಿಂದಿನ ಸರ್ಕಾರ ಹಿಂಜರಿದಿತ್ತು. ಆದರೆ ನಾವು ಅದನ್ನು ಮಾಡಿದ್ದೇವೆ. ಹಿಂದೆಲ್ಲಾ ಭಯೋತ್ಪಾದಕರ ದಾಳಿಯನ್ನು ಭಾರತ ಮೌನವಾಗಿ ಸಹಿಸುತ್ತಿತ್ತು. ಆದರೆ ಈಗ ನಾವು ಭಯೋತ್ಪಾದನೆಗೆ ಹೇಗೆ ಪ್ರತ್ಯುತ್ತರ ಕೊಡುತ್ತೇವೆ ಎಂಬುದನ್ನು ದೇಶವೇ ಆಪರೇಷನ್ ಸಿಂಧೂರ್, ಸರ್ಜಿಕಲ್ ಸ್ಟ್ರೈಕ್ ಮೂಲಕ ನೋಡಿದ್ದೇವೆ. ನಾವು ಮಾವೋವಾದಿಗಳು, ನಕ್ಸಲರಿಂದ ಮುಕ್ತಗೊಳಿಸಿದ್ದೇವೆ.
ತ್ರಿವಳಿ ತಲಾಖ್ ರದ್ದು, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸೈನಿಕರಿಗೆ ಒಂದು ಶ್ರೇಯಾಂಕ ಒಂದು ಪೆನ್ಷನ್ ಪದ್ಧತಿ ಜಾರಿಗೆ ತಂದಿದೆ. ದೇಶ ಹಿತದ ಇಂತಹ ನಿರ್ಣಯಗಳು ಇನ್ನಷ್ಟು ಹೆಚ್ಚಾಗಲಿವೆ ಮತ್ತು ವೇಗ ಪಡೆಯಲಿದೆ. ಕಳೆದ 12 ವರ್ಷಗಳಲ್ಲಿ ಭಾರತ ಏನು ಸಾಧನೆ ಮಾಡಿದೆ ಎಂಬುದನ್ನು ಜಗತ್ತು ನೋಡಿದೆ ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ