ನವದೆಹಲಿ: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕಡಿಮೆ ಬೆಲೆಯಲ್ಲಿ ಜನರಿಗೆ ಅಕ್ಕಿ ಸಿಗುವಂತೆ ಮಾಡಲು ಭಾರತ್ ಬ್ರ್ಯಾಂಡ್ ನ ಅಕ್ಕಿ ಬಿಡುಗಡೆ ಮಾಡಿತ್ತು.
ಆದರೆ ಈಗ ಭಾರತ್ ಅಕ್ಕಿ ಸಿಗದೇ ಗ್ರಾಹಕರು ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಫೆಬ್ರವರಿ 6 ರಂದು ಭಾರತ್ ಬ್ರ್ಯಾಂಡ್ ಅಕ್ಕಿ ಬಿಡುಗಡೆ ಮಾಡಲಾಗಿತ್ತು. ಕೇವಲ 29 ರೂ.ಗೆ ಅಕ್ಕಿ ನೀಡಲಾಗುತ್ತಿತ್ತು. ಭಾರತ್ ಬ್ರ್ಯಾಂಡ್ ಅಕ್ಕಿ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಗ್ರಾಹಕರು ಮುಗಿಬಿದ್ದು ಖರೀದಿ ಮಾಡಿದ್ದರು. ಒಬ್ಬ ವ್ಯಕ್ತಿ 10 ಕೆ.ಜಿ. ಅಕ್ಕಿ ಪಡೆಯಲು ಅವಕಾಶವಿತ್ತು. ಆನ್ ಲೈನ್ ತಾಣಗಳಲ್ಲೂ ಅಕ್ಕಿ ಖರೀದಿಗೆ ಅವಕಾಶವಿದೆ ಎಂದು ಹೇಳಿಕೊಂಡಿತ್ತು.
ಆದರೆ ಇದೀಗ ಯೋಜನೆ ಆರಂಭವಾದ ಕೆಲವೇ ದಿನಗಳಲ್ಲಿ ಭಾರತ್ ಅಕ್ಕಿ ಎಲ್ಲಿ ಕೇಳಿದರೂ ಸಿಗುತ್ತಿಲ್ಲ. ಯೋಜನೆ ಆರಂಭದಲ್ಲೇ ಹೀಗಾದರೆ ಹೇಗೆ? ಹಾಗಿದ್ದರೆ ಅಷ್ಟೆಲ್ಲಾ ಪ್ರಚಾರ ಮಾಡಿ ಭಾರತ್ ಬ್ರ್ಯಾಂಡ್ ಅಕ್ಕಿ ಬಿಡುಗಡೆ ಮಾಡಿದ್ದು ಕೇವಲ ಚುನಾವಣೆ ಗಿಮಿಕ್ಕಾ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಭಾರತ್ ಅಕ್ಕಿ ಪಡೆಯಲು ಬಿಪಿಎಲ್, ಎಪಿಎಲ್ ರೇಷ್ ಕಾರ್ಡ್ ಗಣನೆಗೆ ಬರುವುದಿಲ್ಲ. ಕೇವಲ ನಿಮ್ಮ ಮೊಬೈಲ್ ನಂಬರ್ ನೀಡಿದರೆ ಸಾಕು. ಆದರೆ ಸದ್ಯಕ್ಕೆ ಗ್ರಾಹಕರ ಭಾರೀ ಬೇಡಿಕೆಯಿಂದಾಗಿ ಎಲ್ಲಾ ಕಡೆ ಅಕ್ಕಿ ಖಾಲಿಯಾಗಿದೆ. ಸದ್ಯಕ್ಕೆ ಅಕ್ಕಿ ಮಿಲ್ ನವರ ಜೊತೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲಿಯೇ ಹೊಸ ಸ್ಟಾಕ್ ಬರಲಿದೆ. ಆಗ ಅಕ್ಕಿ ಮೊದಲಿನಂತೆ ಸಿಗುವುದು ಎಂದು ನೆಫೆಡ್ ಹೇಳಿದೆ. ಕೇಂದ್ರ ಸರ್ಕಾರ ಹೇಳಿದಂತೆ ಮೊಬೈಲ್ ವ್ಯಾನ್ ಮೂಲಕ ಅಕ್ಕಿ ಮಾರಾಟ ಮಾಡಲಾಗಿತ್ತು. ಆದರೆ ಆರಂಭದಲ್ಲಿಯೇ ಭಾರೀ ಬೇಡಿಕೆ ಬಂದಿದ್ದರಿಂದ ಕೆಲವೇ ಕ್ಷಣಗಳಲ್ಲಿ ಅಕ್ಕಿ ಖಾಲಿಯಾಗಿದೆ. ಇದೀಗ ಹೊಸ ಸ್ಟಾಕ್ ಬರುವವರೆಗೂ ಕಾಯಬೇಕು. ಆದರೆ ರಿಲಯನ್ಸ್ ಫ್ರೆಶ್, ಫ್ಲಿಪ್ ಕಾರ್ಟ್, ಅಮೆಝೋನ್ ಆನ್ ಲೈನ್ ತಾಣಗಳಲ್ಲೂ ಅಕ್ಕಿ ಸಿಗುತ್ತದೆಂದು ಹುಡುಕಾಡುತ್ತಿರುವ ಗ್ರಾಹಕರಿಗೆ ಸದ್ಯಕ್ಕೆ ನಿರಾಸೆಯಾಗಿದೆ.