ಭೋಪಾಲ್ : ಕಳೆದ ವರ್ಷ ನಮೀಬಿಯಾದಿಂದ ತಂದಿದ್ದ 8 ಚೀತಾಗಳ ಪೈಕಿ, ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಒಂದು ಚೀತಾ ಸಾವನ್ನಪ್ಪಿದೆ. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪರಿಚಯಿಸಲಾಗಿದ್ದ 8 ಚೀತಾಗಳ ಪೈಕಿ, ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಸಾಶಾ ಹೆಸರಿನ 3 ವರ್ಷದ ಚೀತಾ ಸೋಮವಾರ ಮೃತಪಟ್ಟಿದೆ.
ಸಾಶಾ ಭಾರತಕ್ಕೆ ಕರೆತರುವ ಮುನ್ನವೇ ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ಹೇಳಲಾಗಿದೆ. ಈ ವರ್ಷದ ಜನವರಿ 23ರಂದು ಸಾಶಾ ಚೀತಾದಲ್ಲಿ ಅನಾರೋಗ್ಯ ಲಕ್ಷಣಗಳು ಕಂಡುಬಂದಿತ್ತು. ನಂತರ ಆ ಚೀತಾವನ್ನು ಚಿಕಿತ್ಸೆಗಾಗಿ ಕ್ವಾರಂಟೈನ್ನಲ್ಲಿ ಇಡಲಾಗಿತ್ತು.
ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು.