Publish Date: Fri, 11 Oct 2024 (12:23 IST)
Updated Date: Fri, 11 Oct 2024 (12:25 IST)
ಜೈಪುರ: ಕೆಲವರಿಗೆ ಮಕ್ಕಳಿಲ್ಲ ಎಂಬ ಕೊರಗು. ಮತ್ತೆ ಕೆಲವರಿಗೆ ಮಕ್ಕಳಿಂದಲೇ ಕೊರಗು. ರಾಜಸ್ಥಾನದ ಈ ವೃದ್ಧ ದಂಪತಿಯದ್ದೂ ಇದೇ ಕತೆ. ಮಕ್ಕಳಿಂದಲೇ ಇನ್ನಿಲ್ಲದ ಕಿರುಕುಳ ಅನುಭವಿಸಿದ ದಂಪತಿ ಕೊನೆಗೆ ಮಾಡಿದ್ದೇನು ಇಲ್ಲಿ ಓದಿ.
70 ವರ್ಷದ ವೃದ್ಧ ದಂಪತಿಗೆ ಮಕ್ಕಳು ಇನ್ನಿಲ್ಲದಂತೆ ಕಾಟ ಕೊಟ್ಟಿದ್ದಾರೆ. ಅದೂ ಆಸ್ತಿಗಾಗಿ. ಮಕ್ಕಳು, ಸೊಸೆಯಂದಿರು ಸೇರಿಕೊಂಡು ಕೊಲೆ ಬೆದರಿಕೆ ಹಾಕುವ ಮಟ್ಟಿಗೆ ತಲುಪಿದ್ದಾರೆ. ಇದರಿಂದ ಬೇಸತ್ತ ದಂಪತಿ ನೀರಿನ ಟ್ಯಾಂಕರ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಜಾರಿರಾಮ್ ಬಿಷ್ಣೋಯ್ ಮತ್ತು ಚವಾಲಿ ದೇವಿ ಎಂಬ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಮಕ್ಕಳು ಆಸ್ತಿ ಆಸೆಗಾಗಿ ಇನ್ನಿಲ್ಲದ ಕಾಟ ಕೊಡುತ್ತಿದ್ದರು. ವೃದ್ಧ ದಂಪತಿಯಿಂದ ಆಸ್ತಿ, ಕಾರು ಎಲ್ಲವನ್ನೂ ಕಿತ್ತುಕೊಂಡಿದ್ದ ಮಗ-ಸೊಸೆಯಂದಿರು ಬಳಿಕ ಊಟ ಕೊಡದೇ ಚಿತ್ರಹಿಂಸೆ ನೀಡುತ್ತಿದ್ದರು.
ಒಂದು ವೇಳೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ರಾತ್ರಿ ಮಲಗಿದ್ದಾಗಲೇ ಜೀವಂತ ದಹನ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಎರಡು ದಿನಗಳಿಂದ ವೃದ್ಧ ದಂಪತಿಯನ್ನು ಕಾಣದೇ ಸ್ಥಳೀಯರು ಮಗನಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಆತ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳೀಯ ಟ್ಯಾಂಕರ್ ಒಂದರಲ್ಲಿ ಮೃತದೇಹ ಸಿಕ್ಕಿದೆ. ಸಾಯುವ ಮುನ್ನ ದಂಪತಿ ಮನೆಯ ಗೋಡೆಯ ಮೇಲೆ ಡೆತ್ ನೋಟ್ ಅಂಟಿಸಿದ್ದರು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.