Publish Date: Tue, 13 Feb 2024 (17:16 IST)
Updated Date: Tue, 13 Feb 2024 (17:19 IST)
ಒಡಿಶಾ: ಸತ್ತಿದ್ದಾಳೆಂದು ತಿಳಿದು ಚಿತೆಗೇರಿಸಲಾಗಿದ್ದ ಮಹಿಳೆ ಧುತ್ತೆಂದು ಎದ್ದು ಕುಳಿತರೆ ಎದುರಿಗಿದ್ದವರಿಗೆ ಹೇಗಾಗ ಬೇಡ? ಒಡಿಶಾದ ಬ್ರಹ್ಮಾಪುರದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.
52 ವರ್ಷದ ದಲಿತ ಮಹಿಳೆ ಬುಚ್ಚಿ ಅಮ್ಮಾ ಎಂಬಾಕೆ ಮನೆಯಲ್ಲಿ ಅಗ್ನಿ ಅವಘಡದಿಂದಾಗಿ ತೀವ್ರ ಗಾಯಗೊಂಡಿದ್ದಳು. ಆಕೆಯನ್ನು ಕೆಲವು ದಿನ ಆಕೆಯ ಗಂಡ ಪಕ್ಕದ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಬಡತನದ ಕಾರಣ ಪೂರ್ಣ ಗುಣವಾಗುವವರೆಗೂ ಅವರಿಗೆ ಆಸ್ಪತ್ರೆಯಲ್ಲಿ ಇರಲಾಗಲಿಲ್ಲ. ಇನ್ನೊಂದು ಆಸ್ಪತ್ರೆಗೆ ಸೇರಿಸಲಾಗದೇ ಗಂಡ ಸಿಬರಾಂ ಪಾಲೋ ಮನೆಗೆ ಕರೆತಂದಿದ್ದ.
ಮಲಗಿದ್ದ ಮಹಿಳೆ ಅಲ್ಲಾಡದೇ ಇದ್ದಾಗ ಗಂಡ ಸಿಬರಾಂ ಆಕೆ ಸತ್ತಿದ್ದಾಳೆಂದು ಸ್ಥಳೀಯರನ್ನೆಲ್ಲಾ ಕರೆದಿದ್ದ. ಬಳಿಕ ಮುನ್ಸಿಪಾಲಿಟಿ ವಾಹನದಲ್ಲಿ ಆಕೆಯನ್ನು ಸ್ಮಶಾನಕ್ಕೆ ಕರೆದೊಯ್ಯಲಾಯಿತು. ಆದರೆ ಸ್ಮಶಾನದಲ್ಲಿ ಚಿತೆಗೆ ಇನ್ನೇನು ಬೆಂಕಿ ಇಡಬೇಕು ಎಂದಾಗ ಮಹಿಳೆ ಕಣ್ಣು ತೆರೆದಿದ್ದಾಳೆ. ಆಕೆ ಕಣ್ಣು ತೆರೆದು ನೋಡಿದ್ದು ನೋಡಿ ಸುತ್ತಲಿದ್ದವರಿಗೆ ಗಾಬರಿಯಾಗಿದೆ.
ವಿಚಾರಿಸಿದಾಗ ಆಕೆ ಬದುಕಿರುವುದು ಗೊತ್ತಾಗಿದೆ. ನಂತರ ಅದೇ ವಾಹನದಲ್ಲಿ ಆಕೆಯನ್ನು ಮನೆಗೆ ಕರೆತರಲಾಗಿದೆ. ಸ್ವಲ್ಪ ತಡವಾಗಿದ್ದರೂ ಮಹಿಳೆ ಜೀವಂತ ದಹನವಾಗುತ್ತಿದ್ದಳು. ಆದರೆ ಅದೃಷ್ಟವಶಾತ್ ಸ್ವಲ್ಪದರಲ್ಲೇ ಪ್ರಾಣ ಉಳಿದಿದೆ.