ನವದೆಹಲಿ: ಬಿಹಾರದಲ್ಲಿ ಇಂಡಿಯಾ ಒಕ್ಕೂಟದ ಹೀನಾಯ ಸೋಲಿನ ಬಳಿಕ ಈಗ ರಾಹುಲ್ ಗಾಂಧಿ ನಾಯಕತ್ವದ ಬಗ್ಗೆಯೇ ಅಪಸ್ವರ ಕೇಳಿಬಂದಿದೆ. ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷವೇ ನಮಗೆ ರಾಹುಲ್ ಗಾಂಧಿ ಬೇಡ ಎಂದಿದೆ.
ಬಿಜೆಪಿ ನೇತೃತ್ವದ ಎನ್ ಡಿಎ ಮಣಿಸಲು ಕಾಂಗ್ರೆಸ್ ತನ್ನ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟವನ್ನು ರೂಪಿಸಿತ್ತು. ಇದರಲ್ಲಿ ಕಾಂಗ್ರೆಸ್ ಪ್ರಮುಖ ಪಾಲುದಾರ. ಹೀಗಾಗಿ ರಾಹುಲ್ ಗಾಂಧಿಯೇ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರಾಗಿದ್ದಾರೆ.
ಆದರೆ ಈಗ ಬಿಹಾರದಲ್ಲಿ ಆರ್ ಜೆಡಿ-ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಹೀನಾಯ ಸೋಲು ಅನುಭವಿಸಿದೆ. ಇದಾದ ಬಳಿಕ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿರುವ ಸಮಾಜವಾದಿ ಪಕ್ಷ ನಮಗೆ ರಾಹುಲ್ ಗಾಂಧಿ ನಾಯಕತ್ವವೇ ಬೇಡ ಎನ್ನುತ್ತಿದೆ.
ಇಂಡಿಯಾ ಒಕ್ಕೂಟಕ್ಕೆ ನಾಯಕರಾಗಲು ಅಖಿಲೇಶ್ ಯಾದವ್ ಸೂಕ್ತ. ಸಮಾಜವಾದಿ ಪಕ್ಷದ ಶಾಸಕ ರವಿದಾಸ್ ಮೆಹ್ರೋತ್ರಾ ಇಂಡಿಯಾ ಒಕ್ಕೂಟ ಮುನ್ನಡೆಸಲು ಅಖಿಲೇಶ್ ಯಾದವ್ ಸೂಕ್ತ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಇಲ್ಲದೆಯೂ ಅಧಿಕಾರಕ್ಕೇರಲು ನಮ್ಮ ಪಕ್ಷ ಸಮರ್ಥವಾಗಿದೆ ಎಂದಿದ್ದಾರೆ. ಇದರೊಂದಿಗೆ ಈಗ ಇಂಡಿಯಾ ಒಕ್ಕೂಟದಲ್ಲೇ ಅಪಸ್ವರವೆದ್ದಂತಾಗಿದೆ.