ನವದೆಹಲಿ :ಬಿಹಾರದ ಸಿಎಂ ನಿತೀಶ್ ಕುಮಾರ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಈ ರೀತಿ ಬರುವವರು ಹೋಗುವವರು ಬೇಕಾದಷ್ಟು ಜನರು ಇದ್ದಾರೆ ಎಂದು ಕುಟುಕಿದರು. ಐಎನ್‌ಡಿಐಎ ಒಕ್ಕೂಟಕ್ಕೆ ವಿದಾಯ ಹೇಳಿ ಎನ್‌ಡಿಎ ಒಕ್ಕೂಟ ಸೇರಲಿರುವ ನಿತೀಶ್ ಕುಮಾರ್ ನಿರ್ಧಾರದ ಬಗ್ಗೆ ನನಗೆ ಮೊದಲೇ ತಿಳಿದಿತ್ತ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅವರು ಮತ್ತು ನಾವು ಈ ಮೊದಲು ಒಟ್ಟಿಗೆ ಹೋರಾಟ ನಡೆಸಿದ್ದೆವು. ನಾನು ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರೊಂದಿಗೆ ಮಾತುಕತೆ ನಡೆಸಿದಾಗ ಅವರೂ ಸಹ ನಿತೀಶ್ ನಿರ್ಗಮಿಸುವುದು ಖಚಿತ ಎಂದು ಹೇಳಿದ್ದರು. ಅವರು ಉಳಿಯಲು ಬಯಸಿದ್ದರೆ ನಮ್ಮಲ್ಲೇ ಉಳಿಯಬಹುದಿತ್ತು. ಆದರೆ ಅವರು ಹೊರಹೋಗಲು ನಿರ್ಧರಿಸಿದ್ದರು. ಈಗ ನಾವು ಏನಾದರೂ ತಪ್ಪು ಹೇಳಿಕೆ ನೀಡಿದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಖರ್ಗೆ ಹೇಳಿದರು. ಲಾಲು ಮತ್ತು ತೇಜಸ್ವಿ ನುಡಿದಿದ್ದ ಭವಿಷ್ಯ ಇಂದು ನಿಜವಾಗಿದೆ. ಈ ರೀತಿಯ ಆಯಾರಾಮ್ ಗಯಾರಾಮ್ ಗಳು ದೇಶದಲ್ಲಿ ಬೇಕಾದಷ್ಟು ಮಂದಿ ಇದ್ದಾರೆ ಎಂದು ಖರ್ಗೆ ಟೀಕಿಸಿದ್ದಾರೆ.