Publish Date: Wed, 29 Jul 2026 (13:30 IST)
Updated Date: Wed, 29 Jul 2026 (13:35 IST)
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಬಡವರಿಗೆ ನೀಟ್ ಪರೀಕ್ಷೆ ಎನ್ನುವುದು ಕನಸಿನ ಮಾತಾಗಿದೆ. ಯಾಕೆಂದರೆ ಇದಕ್ಕೆ ಕಾರಣ ನೀಟ್ ಕೋಚಿಂಗ್ ಹೆಸರಿನಲ್ಲಿ ಕೆಲವು ಕೋಚಿಂಗ್ ಸೆಂಟರ್ ಗಳು ಲಕ್ಷಗಟ್ಟಲೆ ಫೀಸ್ ಪೀಕುತ್ತಿರುವುದು. ಇದರ ಬಗ್ಗೆ ಕೊನೆಗೂ ಈಗ ಸಂಸತ್ ನಲ್ಲಿ ಚರ್ಚೆಯಾಗಿದೆ.
ನೀಟ್ ಸೇರಿದಂತೆ ಪರೀಕ್ಷೆಅಕ್ರಮ ಕುರಿತಾಗಿ ಈಗ ಸಂಸತ್ ನಲ್ಲಿ ನಿನ್ನೆ ಬಿಸಿ ಬಿಸಿ ಚರ್ಚೆಯಾಗಿದೆ. ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಕಾವೇರಿದ್ದವು. ಈ ನಡುವೆ ಶಿವಸೇನಾ ಸಂಸದ ಡಾ ಶ್ರೀಕಾಂತ್ ಶಿಂಧೆ ಕೋಚಿಂಗ್ ಸೆಂಟರ್ ಗಳ ಫೀಸ್ ದಂಧೆ ಬಗ್ಗೆ ಧ್ವನಿಯೆತ್ತಿದ್ದಾರೆ.
ದೇಶದಾದ್ಯಂತ ನೀಟ್ ಕೋಚಿಂಗ್ ನೀಡುವ ಸಾಕಷ್ಟು ಕೋಚಿಂಗ್ ಸೆಂಟರ್ ಗಳಿವೆ. ಒಬ್ಬೊಬ್ಬ ವಿದ್ಯಾರ್ಥಿಯಿಂದಲೂ ಇವುಗಳು ಲಕ್ಷ ಲಕ್ಷ ಫೀಸ್ ಪೀಕುತ್ತಿವೆ. ಇದರಿಂದಾಗಿ 500 ಕೋಟಿಯಷ್ಟು ಬ್ಯುಸಿನೆಸ್ ಹೊಂದಿರುವ ಕೋಚಿಂಗ್ ಉದ್ಯಮ 2030 ರ ವೇಳೆಗೆ 1 ಲಕ್ಷ ಕೋಟಿ ರೂ ತಲುಪಲಿದೆ ಎಂಬ ಅಂಶವನ್ನು ಹೇಳಿದ್ದಾರೆ.
ಕೋಚಿಂಗ್ ಸೆಂಟರ್ ಗಳ ಈ ಲಂಗು ಲಗಾಮಿಲ್ಲದ ಫೀಸ್ ದಂಧೆಗೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ. ನೀಟ್ ಪರೀಕ್ಷೆ ಜಾರಿಗೆ ಬಂದ ಬೆನ್ನಲ್ಲೇ ಕೋಚಿಂಗ್ ಸೆಂಟರ್ ಗಳೂ ನಾಯಿ ಕೊಡೆಯಂತೆ ತಲೆಯೆತ್ತಿವೆ. ಇತ್ತೀಚೆಗಂತೂ ವರ್ಷಕ್ಕೆ ಕಾಲೇಜು ಫೀಸ್ ಗಿಂತಲೂ ದುಬಾರಿ ಶುಲ್ಕ ಪಡೆಯುತ್ತಿವೆ.
ಅತ್ತ ಕೋಚಿಂಗ್ ಇಲ್ಲದೇ ನೀಟ್ ಪರೀಕ್ಷೆ ಪಾಸಾಗಲು ಕಷ್ಟ. ಆದರೆ ಮಧ್ಯಮ ಮತ್ತು ಬಡ ಪೋಷಕರಿಗೆ ಲಕ್ಷಗಟ್ಟಲೆ ಫೀಸ್ ಕೊಟ್ಟು ಶುಲ್ಕ ಪಾವತಿಸುವುದು ಕಷ್ಟವಾಗುತ್ತಿದೆ. ಇದರಿಂದ ಎಷ್ಟೋ ಪೋಷಕರು ಲೋನ್ ಪಡೆಯುವ ಮಟ್ಟಕ್ಕೆಬಂದಿದ್ದಾರೆ ಎಂದು ಡಾ ಶ್ರೀಕಾಂತ್ ಶಿಂಧೆ ಗಮನ ಸೆಳೆದಿದ್ದಾರೆ. ಇದು ಎಷ್ಟೋ ಪೋಷಕರ ಅಳಲಾಗಿದೆ. ನೀಟ್ ಪರೀಕ್ಷೆ ಅಕ್ರಮಕ್ಕೆ ಕಡಿವಾಣ ಹಾಕಲು ಹೊರಟಿರುವ ಸರ್ಕಾರ ಇಂತಹ ಸಂಸ್ಥೆಗಳ ಫೀಸ್ ದಂಧೆಗೂ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಇಲ್ಲದೇ ಹೋದರೆ ನೀಟ್, ವೈದ್ಯಕೀಯ ಕೋರ್ಸ್ ಎನ್ನುವುದು ಕೇವಲ ಶ್ರೀಮಂತರ ಸೊತ್ತಾಗಲಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ