ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿ ವರದಿ ಪ್ರಸಾರ ಮಾಡಿದ್ದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೇರಿರುವ ಒಂದು ದಿನದ ನಿಷೇಧ ಪ್ರಶ್ನಿಸಿ ಖಾಸಗಿ ಸುದ್ದಿ ವಾಹಿನಿ ಸೋಮವಾರ ಎನ್‌ಡಿ ಟಿವಿ ಸುಪ್ರೀಂ ಮೆಟ್ಟಿಲೇರಿದೆ. ಇಂದು ಸುಪ್ರೀಂ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಪಠಾಣ್ ಕೋಟ್ ಉಗ್ರರ ದಾಳಿ ಸಂದರ್ಭದ ಸೂಕ್ಷ್ಮ ವಿಚಾರಗಳನ್ನು ಬಿತ್ತರಿಸಿ, ಪ್ರಸಾರ ನಿಯಮ ಉಲ್ಲಂಘಿಸಿದ ಆರೋಪದಡಿ ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 10ರ ಮಧ್ಯರಾತ್ರಿಯವರೆಗೆ 24ಗಂಟೆ ಯಾವುದೇ ಕಾರ್ಯಕ್ರಮ, ಸುದ್ದಿ ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ಎನ್‌ಡಿ ಟಿವಿಗೆ ಆದೇಶಿಸಿದೆ.
ನೀವು ಬಿತ್ತರಿಸಿರುವ ಮಾಹಿತಿ ಉಗ್ರರ ಕೈಗೆ ಸಿಕ್ಕರೆ ಕೇವಲ ದೇಶದ ಭದ್ರತೆಗಷ್ಟೇ ಅಲ್ಲ, ನಾಗರಿಕರ ಮತ್ತು ಭದ್ರತಾ ಸಿಬ್ಬಂದಿ ಜೀವಕ್ಕೂ ಹಾನಿ ತಲುಪಿಸುವಂತದ್ದು ಎಂದು ಕೇಂದ್ರ ಸುದ್ದಿ ವಾಹಿನಿಗೆ ಹೇಳಿದೆ.
ಕೇಬಲ್ ಕಾಯಿದೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪವನ್ನು ಸುದ್ದಿ ವಾಹಿನಿ ತಳ್ಳಿ ಹಾಕಿದೆ. ಇತರ ಸುದ್ದಿ ವಾಹಿನಿಗಳು ಅದೇ ಸುದ್ದಿಯನ್ನು ಬಿತ್ತರಿಸಿವೆ ಮತ್ತು ಹಲವು ದಿನಪತ್ರಿಕೆಗಳಲ್ಲಿ ಇದೇ ಸುದ್ದಿ ಪ್ರಕಟವಾಗಿದೆ ಎಂದು ವಾಹಿನಿ ವಾದಿಸಿದೆ.
ಈ ನಿಷೇಧಕ್ಕೆ ವಿರೋಧ ಪಕ್ಷಗಳು ಸೇರಿದಂತೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ತುರ್ತುಪರಿಸ್ಥಿತಿ ದಿನಗಳು ನೆನಪಿಗೆ ಬರುತ್ತಿವೆ, ದೇಶ ನಿರಂಕುಶತೆಯತ್ತ ಸಾಗುತ್ತಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ