ಬಿಹಾರ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಯಾದವ್ ಅವರ "ಫಾಲ್ತು ಹೈ ಕುಂಭ್" ಹೇಳಿಕೆಗಳ ಬಗ್ಗೆ ವಾಗ್ದಾಳಿ ನಡೆಸಿದರು.
"ಜಂಗಲ್ ರಾಜ್ ಅನ್ನು ನಂಬುವವರು ನಮ್ಮ ಪರಂಪರೆಯನ್ನು ದ್ವೇಷಿಸುತ್ತಾರೆ. ಮಹಾಕುಂಭದ ಬಗ್ಗೆ ನೆಗೆಟಿವ್ ಆಗಿ ಮಾತನಾಡುವವರನ್ನು ಬಿಹಾರ ಜನತೆ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಬಿಹಾರದ ಭಾಗಲ್ಪುರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಏಕತೆಯನ್ನು ಎತ್ತಿತೋರಿಸಿದೆ. ಈ ಆಚರಣೆಯು ಭಾರತದ ನಂಬಿಕೆ, ಏಕತೆ ಮತ್ತು ಸಾಮರಸ್ಯದ ಅತಿ ದೊಡ್ಡ ಸಭೆಯನ್ನು ಪ್ರತಿನಿಧಿಸುತ್ತದೆ ಎಂದರು.
"ಯುರೋಪಿನ ಇಡೀ ಜನಸಂಖ್ಯೆಗಿಂತ ಹೆಚ್ಚಿನ ಜನರು ಈ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಆದರೆ, 'ಜಂಗಲ್ ರಾಜ್'ನಿಂದ ಬಂದವರು ಈ ಪವಿತ್ರ ಘಟನೆಯನ್ನು ಟೀಕಿಸುತ್ತಿದ್ದಾರೆ. ರಾಮ ಮಂದಿರದ ವಿರುದ್ಧ ಇರುವವರು ಮಹಾಕುಂಭವನ್ನು ನಿಂದಿಸುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಪವಿತ್ರ ಸಂದರ್ಭದ ಬಗ್ಗೆ ಕೆಟ್ಟದಾಗಿ ಮಾತನಾಡುವವರನ್ನು ಬಿಹಾರದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ನನಗೆ ವಿಶ್ವಾಸವಿದೆ" ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಸ್ತುತ ಪ್ರಯಾಗರಾಜ್‌ನಲ್ಲಿ 'ಏಕತೆಯ ಮಹಾಕುಂಭ' ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದು ಭಾರತದ ನಂಬಿಕೆ, ಏಕತೆ ಮತ್ತು ಸಾಮರಸ್ಯದ ಅತಿದೊಡ್ಡ ಆಚರಣೆಯನ್ನು ಪ್ರತಿನಿಧಿಸುತ್ತದೆ.
ಭಾರತದ ಭವ್ಯ ಪರಂಪರೆಯನ್ನು ಸಂರಕ್ಷಿಸಲು ಮತ್ತು ಭವ್ಯ ಭವಿಷ್ಯವನ್ನು ನಿರ್ಮಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಒತ್ತಿ ಹೇಳಿದರು.