ತನ್ನ ಸ್ನೇಹಿತನ ಭಾವಿ ಪತ್ನಿಗೆ ಬೆದರಿಕೆ ಹಾಕುತ್ತಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು ಉದ್ಯಮಪತಿಯೊಬ್ಬರ ಮಗ, ಎಮ್‌ಬಿಎ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಂದ್ರಾಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆರೋಪಿ ವಿಕಾಸ್ ಅಗ್ರವಾಲ್‌ನನ್ನು ವಶಕ್ಕೆ ಪಡೆದಿರುವ ರಬೋಡಿ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ.
ಚಾರ್ಟೆಂಡ್ ಅಕೌಂಟೆಂಟ್ ಆಗಿರುವ 23 ವರ್ಷದ ಪೀಡಿತೆ ತನ್ನ ಭಾವಿ ಪತಿ ಮೊಬೈಲ್‌ಗೆ ಕಳುಹಿಸಿದ್ದ ಖಾಸಗಿ ಫೋಟೋಗಳನ್ನು ಆರೋಪಿ ವಿಕಾಸ್ ವಂಚನೆಯಿಂದ ತನ್ನ ಮೊಬೈಲ್‌ಗೆ ವರ್ಗಾಯಿಸಿಕೊಂಡಿದ್ದ ಮತ್ತು ಆಕೆಗೆ 5 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದ. ಆ ಮೂಲಕ ತಾನು ಮಾಡಿಕೊಂಡಿದ್ದ ಸಾಲಗಳನ್ನು ತೀರಿಸುವುದು ಅವನ ದುರುದ್ದೇಶವಾಗಿತ್ತು.
ಕಳೆದ 6 ದಿನಗಳ ಹಿಂದೆ ಯುವತಿಯ ಆಫೀಸಿಗೆ ಒಂದು ಪಾರ್ಸಲ್ ಬಂದಿತ್ತು. ಅದರಲ್ಲಿದ್ದ ಪೆನ್ ಡ್ರೈವ್‌ನಲ್ಲಿ ಆಕೆಯ ಸೆಲ್ಫಿ ಫೋಟೋಗಳಿದ್ದವು. ಸ್ವಲ್ಪ ಸಮಯದ ಬಳಿಕ ಸಾರ್ವಜನಿಕ ದೂರವಾಣಿಯಿಂದ ಕರೆ ಮಾಡಿದ ವ್ಯಕ್ತಿ ನೀನು ನನಗೆ 5 ಲಕ್ಷ ರೂಪಾಯಿ ನೀಡದಿದ್ದರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬೆದರಿಸಿದ್ದಾನೆ.
ತಾನು ಮೊಬೈಲ್ ರಿಪೇರಿಗೆ ನೀಡಿದ್ದ ಅಂಗಡಿಯಲ್ಲಿ ಈ ಫೋಟೋಗಳನ್ನು ಕದಿಯಲಾಯಿತು ಎಂದು ಯುವತಿ ಭಾವಿಸಿದಳು. ಆದರೆ ಅವರದೇನು ತಪ್ಪಿಲ್ಲ ಎಂಬುದು ಬಳಿಕ ಆಕೆಯ ಅರಿವಿಗೆ ಬಂತು. ಪೊಲೀಸರಿಗೆ ದೂರು ನೀಡಲಾಗಿ ಅವರು ಆಕೆಯ ಬಳಿ ಈ ಫೋಟೋಗಳನ್ನು ಯಾರಿಗಾದರೂ ಕಳುಹಿಸಿದ್ದೀಯಾ ಎಂದು ಕೇಳಿದಾಗ ತನ್ನ ಭಾವಿ ಪತಿಗೆ ಎಂದು ಉತ್ತರಿಸಿದ್ದಾಳೆ. ಆಕೆಯ ಬಾವಿ ಪತಿ ಮತ್ತು ಆತನ ಸ್ನೇಹಿತರ ಮೇಲೆ ಸಂಶಯಗೊಂಡ ಪೊಲೀಸರು, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿ ಹೇಳಿದ ಸ್ಥಳಕ್ಕೆ ಆಕೆಯನ್ನು ಕಳುಹಿಸಿ ಹಣವನ್ನು ಪಡೆಯಲು ಆಗಮಿಸಿದ ಆರೋಪಿಯನ್ನು ಬಂಧಿಸಿದ್ದಾರೆ.
ತಾನು ಆಕೆಯ ಭಾವಿ ಪತಿಯ ಬಾಲ್ಯ ಸ್ನೇಹಿತನಾಗಿದ್ದು ಆತನ ಜತೆ ಥೈಲ್ಯಾಂಡ್ ಪ್ರವಾಸಕ್ಕೆ ಹೋದಾಗ ಫೋಟೋಗಳನ್ನು ಕದ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ತಾನು 10-15 ಲಕ್ಷ ಸಾಲ ಮಾಡಿಕೊಂಡಿದ್ದು ಅದನ್ನು ತೀರಿಸಲು ಈ ಕೃತ್ಯಕ್ಕೆ ಕೈ ಹಾಕಿರುವುದಾಗಿ ಆತ ಹೇಳಿದ್ದಾನೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.