Select Your Language

Notifications

webdunia
webdunia
webdunia
webdunia

ಮಾನವ ರೂಪಿ ತಂತ್ರಜ್ಞಾನ, ನೀರಾವರಿ ಸೌಕರ್ಯಗಳ ಮಾಸ್ಟರ್ ಮೈಂಡ್ ಸರ್. ಎಂ. ವಿಶ್ವೇಶ್ವರಯ್ಯ

ಮಾನವ ರೂಪಿ ತಂತ್ರಜ್ಞಾನ, ನೀರಾವರಿ ಸೌಕರ್ಯಗಳ ಮಾಸ್ಟರ್ ಮೈಂಡ್ ಸರ್. ಎಂ. ವಿಶ್ವೇಶ್ವರಯ್ಯ
ಬೆಂಗಳೂರು , ಬುಧವಾರ, 15 ಸೆಪ್ಟಂಬರ್ 2021 (12:00 IST)
“ನಿನ್ನ ಕೆಲಸ ರೈಲು ನಿಲ್ದಾಣದಲ್ಲಿ ಕಸ ಗುಡಿಸುವುದಾದರೂ ಸರಿ. ಅದನ್ನು ನಿಷ್ಠೆಯಿಂದ ಮಾಡು. ಮುಂದೆ ನೀನು ಉನ್ನತಿಗೇರಲು ಅದು ಸಹಾಯ ಮಾಡುತ್ತದೆ’ ಎಂಬ ಸರ್ ಎಂ. ವಿಶ್ವೇಶ್ವರಯ್ಯ ಅವರ ಮಾತು ಕಾಲಾತೀತವಾದುದು.
Photo Courtesy: Google

ಅದು ನಿಜ ಕೂಡ ಹೌದು. ಮಾಡುವ ಕೆಲಸ ಯಾವುದಿದ್ದರೂ ಸರಿ ಅದನ್ನು ನಿಯತ್ತಿನಿಂದಲೇ ಮಾಡಬೇಕು. ಶಿಕ್ಷಣ ಅಥವಾ ಉದ್ಯೋಗಕ್ಕೂ ಇದು ಅನ್ವಯ. ಅದನ್ನು ಪ್ರೀತಿಸಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ತನ್ನ ಪರಿಶ್ರಮದಿಂದಲೇ ಕಲಿತು ಮೈಸೂರು ದಿವಾನರಾಗಿ ಭಾರತ ರತ್ನ ಪಡೆದ ಮೊದಲ ಕನ್ನಡಿಗರೆಂಬ ಕೀರ್ತಿ ಗಳಿಸಿದ ಇವರ ಸಾಧನೆ ಅಪಾರವಾದುದು.
ಸಾಧನೆಯ ಹಾದಿ ಎಂದಿಗೂ ಸುಲಭವಾಗಿರುವುದಿಲ್ಲ. ವಿಶ್ವೇಶ್ವರಯ್ಯನವರು ಹುಟ್ಟಿದ್ದು 1860 ಸೆಪ್ಟೆಂಬರ್ 15ರಂದು. ಹಿರಿಯರು ಆಂಧ್ರಪ್ರದೇಶದ ಮೋಕ್ಷಗುಂಡಂನವರು. ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದು ಚಿಕ್ಕಬಳ್ಳಾಪುರ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ವಿದ್ಯಾಭ್ಯಾಸ ಪೂರ್ತಿಗೊಳಿಸಲು ಕಷ್ಟಪಡುತ್ತಿದ್ದರು. ಬಳಿಕ ಸೋದರ ಮಾವನ ಸಹಾಯದಿಂದ ಬೆಂಗಳೂರಿನಲ್ಲಿ ಮನೆ ಪಾಠ ಮಾಡುತ್ತಾ ಶಿಕ್ಷಣ ಮುಂದುವರಿಸಿದರು.
ಮೆಟ್ರಿಕ್ ಪರೀಕ್ಷೆಯಲ್ಲಿ ಮೈಸೂರು ಸಂಸ್ಥಾನಕ್ಕೆ ಮೊದಲಿಗರಾಗಿ ತೇರ್ಗಡೆ ಹೊಂದಿದ್ದ ಅವರು ಆ ಬಳಿಕ ಎಂಜಿನಿಯರಿಂಗ್ ಪದವಿಯನ್ನು ಪುಣೆಯಲ್ಲಿ ಗಳಿಸಿದರು. ತಮ್ಮ 24ನೇ ವಯಸ್ಸಿನಲ್ಲಿ ಮುಂಬಯಿ ಪ್ರಾಂತ್ಯದ ಸಹಾಯಕ ಎಂಜಿನಿಯರ್ ಆಗಿ ವಿಶ್ವೇಶ್ವರಯ್ಯ ನೇಮಕಗೊಂಡರು. ಅವರ ಕಾರ್ಯ ಚತುರತೆ ಆರಂಭವಾದದ್ದು ಅಲ್ಲಿಂದಲೇ. ಮುಂದೆ ವಿದೇಶಗಳಲ್ಲೂ ತಮ್ಮ ನೈಪುಣ್ಯವನ್ನು ಒರೆಗೆ ಹಚ್ಚಿದರು. ಲಂಡನ್ನ ಏಡನ್ನಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅತ್ಯಂತ ಸಮರ್ಪಕವಾಗಿ ನಿರ್ಮಿಸಿಕೊಟ್ಟ ಕೀರ್ತಿ ಇವರದ್ದು.
ಶಿಕ್ಷಣದ ಹರಿಕಾರ
ಪ್ರತಿಯೋರ್ವ ಮಗುವಿಗೂ ಶಿಕ್ಷಣ ಅತೀ ಅಗತ್ಯ ಎಂಬುದನ್ನು ವಿಶ್ವೇಶ್ವರಯ್ಯ ಅವರು ಹೇಳುವುದರ ಜತೆಗೆ ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನೂ ಕಲ್ಪಿಸಿಕೊಟ್ಟಿದ್ದರು. ಮೈಸೂರಿನ ದಿವಾನರಾಗಿದ್ದ ಸಂದರ್ಭದಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದರು. ಜತೆಗೆ ಅಲ್ಪ ಸಂಖ್ಯಾಕರು, ಬಡವರಿಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನೂ ಮಾಡಿದ್ದರು. ಇದೇ ಕಾರಣಕ್ಕೆ ಮದ್ರಾಸ್ ಸಂಸ್ಥಾನದ ಆಡಳಿತಲ್ಲಿದ್ದ ಮೈಸೂರು ವಿವಿಯನ್ನು ಸ್ವತಂತ್ರಗೊಳಿಸಿದರು. ಅನೇಕ ಶಾಲಾ ಕಾಲೇಜುಗಳನ್ನು ಆರಂಭಿಸಿದ ವಿಶ್ವೇಶ್ವರಯ್ಯ ಅವರ ಉದ್ದೇಶ ಒಂದೇ-ಶಿಕ್ಷಣ ಎಲ್ಲರ ಹಕ್ಕು ಎಂದಾಗಿತ್ತು. ಅವರ ನೆನೆಪಿಗಾಗಿ ಹಲವು ಕಾಲೇಜುಗಳು ಇಂದು ಕರ್ನಾಟಕದಲ್ಲಿವೆ. ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸಂದರ್ಭದಲ್ಲಿ ಅವರ ಸಾಧನೆಯನ್ನು ಮೆಚ್ಚಿ ಬ್ರಿಟಿಷ್ ಸರಕಾರ ಸರ್ ಪದವಿಯನ್ನು ನೀಡಿದೆ. 1955ರಲ್ಲಿ ಭಾರತ ಸರಕಾರ ಭಾರತರತ್ನ ಪ್ರಶಸ್ತಿ ನೀಡಿದೆ.
ನೀರಾವರಿ ಸೌಕರ್ಯಗಳ ಮಾಸ್ಟರ್ ಮೈಂಡ್
ಮೈಸೂರು ದಿವಾನರಾಗಿದ್ದ ಸಂದರ್ಭದಲ್ಲಿ ಕೃಷಿ ಪ್ರದೇಶಗಳಿಗೆ ನೀರಿನ ಸಮಸ್ಯೆ ಇಲ್ಲವಾಗಿಸಲು ವಿಶ್ವೇಶ್ವರಯ್ಯ ಅವರು ಕಂಡುಕೊಂಡ ಮಾರ್ಗ ಕೃಷ್ಣರಾಜಸಾಗರ ಅಣೆಕಟ್ಟು. ಇಂದಿಗೂ ಅದು ಗುರುತಿಸಲ್ಪಡುವುದು ವಿಶ್ವೇಶ್ವರಯ್ಯ ಅವರ ಹೆಸರಿನಿಂದಲೇ. ಕಾವೇರಿ ನದಿಗೆ ಕಟ್ಟಿದ ಅತೀ ದೊಡ್ಡ ಅಣೆಕಟ್ಟು ಇದಾಗಿದೆ. ಇದರ ಎತ್ತರದ ಬಗ್ಗೆ ಒಂದಷ್ಟು ವಿರೋಧಗಳಿದ್ದರೂ ದೂರದೃಷ್ಟಿಯಿಂದ ಇದನ್ನು ನಿರ್ಮಿಸಿದ್ದರು.
ಯೋಜನೆಗೆ ಪೇಟೆಂಟ್
ನೀರಾವರಿ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ವಿಶ್ವೇಶ್ವರಯ್ಯನವರ ತಂತ್ರಗಾರಿಕೆ ಅತ್ಯಂತ ಯಶಸ್ವಿಯಾದ ಒಂದು ಯೋಜನೆ. ಇದಕ್ಕಾಗಿ ಅವರು ಆ ಯೋಜನೆಯ ಪೇಟೆಂಟ್ಅನ್ನು ಕೂಡ ತಮ್ಮ ಹೆಸರಿನಲ್ಲಿ ಹೊಂದಿದ್ದರು. ಪುಣೆ ಮತ್ತು ಸುತ್ತಲಿನ ಪ್ರದೇಶಗಳಿಗೆ ಕರ್ಕಿ ನದಿಯಿಂದ ಸ್ವಯಂ ಚಾಲಿತ ಕವಾಟುಗಳ ಮೂಲಕ ನೀರು ಹರಿಸುವುದೇ ಈ ಯೋಜನೆ. ತನ್ನ ಕೆಲಸದಲ್ಲಿ ಉತ್ತಮ ಹಿಡಿತ ಹೊಂದಿದ್ದರೂ, ಆಂಗ್ಲರ ಕಾರಣದಿಂದ ತನಗೆ ಲಭಿಸಬೇಕಾದ ಸ್ಥಾನ ದೊರೆಯದಿದ್ದಾಗ ಕೆಲಸಕ್ಕೆ ರಾಜೀನಾಮೆ ನೀಡಿ ಹುಟ್ಟೂರಿಗೆ ಹಿಂದಿರುಗಿದರು.
ಮೈಸೂರು ದಿವಾನರಾಗಿ ವಿಶ್ವೇಶ್ವರಯ್ಯ
ಪರಿಶ್ರಮ ಪಡುವ ಎಲ್ಲರಿಗೂ ಅತ್ಯಂತ ಉನ್ನತ ಹುದ್ದೆಗಳು ದೊರೆಯುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರಂತೆ 1909ರಲ್ಲಿ ಮೈಸೂರಿನ 4ನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ದಿವಾನರಾಗಿ ವಿಶ್ವೇಶ್ವರಯ್ಯ ಅವರು ನೇಮಕಗೊಂಡರು. ತನ್ನ ಹುದ್ದೆಯ ಪ್ರಯೋಜನವನ್ನು ಸಂಬಂಧಿಕರು ಪಡೆದುಕೊಳ್ಳಬಾರದೆಂದು ತಿಳಿಸಿದ ಮೇಲೇಯೇ ಅವರು ಈ ಹುದ್ದೆಗೆ ಸಮ್ಮತಿಯನ್ನು ನೀಡಿದ್ದರು. ಅದರಂತೆ ನಡೆದುಕೊಂಡ ಅವರು ತಮ್ಮ ಖಾಸಗಿ ಜೀವನಕ್ಕೆ ಹುದ್ದೆಯ ಸೌಲಭ್ಯಗಳನ್ನು ಎಂದೂ ಬಳಸಿಕೊಂಡಿರಲಿಲ್ಲ. ಅದಕ್ಕಿಂತ ಹೆಚ್ಚೆಂದರೆ ನಿವೃತ್ತಿಯಾದ ಬಳಿಕ ಅರಮನೆಯಿಂದ ಕಾಲ್ನಡಿಗೆಯಲ್ಲಿ ಮನೆಗೆ ಹೊರಟಿದ್ದರು. ಹುದ್ದೆಯ ಸೌಲಭ್ಯಗಳು ಏನಿದ್ದರೂ ಅಧಿಕಾರದಲ್ಲಿರುವಾಗ ಮಾತ್ರ ಎಂಬುದು ಅವರ ಸಿದ್ಧಾಂತವಾಗಿತ್ತು.
ಮಾತಿಗಿಂತ ಕೃತಿ ಮುಖ್ಯ
ಸಾಧನೆ ಎಂದರೆ ನಮ್ಮ ಬಗ್ಗೆ ನಾವೇ ಮಾತನಾಡಿಕೊಳ್ಳುವುದಲ್ಲ. ಬದಲಾಗಿ ಇತರರನ್ನು ನಿಬ್ಬೆರಗಾಗಿಸುವುದು ಎಂಬುದಕ್ಕೆ ವಿಶ್ವೇಶ್ವರಯ್ಯನವರು ಉತ್ತಮ ಉದಾಹರಣೆ. ಒಂದು ಬಾರಿ ಅವರ ಯಶಸ್ಸನ್ನು ಮೆಚ್ಚಿ ಗಣ್ಯರೆಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸಿದರು. ಕೊನೆಗೆ ವಿಶ್ವೇಶ್ವರಯ್ಯ ಅವರ ಬಳಿ ಮಾತನಾಡಲು ಹೇಳಿದಾಗ ಅವರು ಹೇಳಿದ್ದು ಒಂದೇ ಪದ ಥ್ಯಾಂಕ್ಯೂ. ಮಾತಿಗಿಂತ ಕೃತಿ ಮೇಲು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ತಮ್ಮ ತೊಂಬತ್ತನೇ ವಯಸ್ಸಿನಲ್ಲೂ ಅತೀ ಚುರುಕಾಗಿ ಓಡಾಡಿಕೊಂಡಿದ್ದ ಅವರ ಜೀವನಶೈಲಿ ಇಂದಿನವರಿಗೆ ಮಾದರಿ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದಿಂದ ಆಡಳಿತಕ್ಕೆ ಮೇಜರ್ ಸರ್ಜರಿ : 10 ಐಎಎಸ್ ಅಧಿಕಾರಿಗಳ ವರ್ಗಾವಣೆ