Publish Date: Mon, 30 May 2022 (14:37 IST)
Updated Date: Mon, 30 May 2022 (13:41 IST)
ಲಕ್ನೋ : ಮದುವೆ ವೇಳೆ ಫೋಟೋಗ್ರಾಫರ್ ಇಲ್ಲ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ವಧು ಒಬ್ಬಳು ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ಮದುವೆ ವೇಳೆ ಸುಂದರವಾದ ಫೋಟೋಗಳನ್ನು ಹಿಡಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ತಮ್ಮ ಆಪ್ತರು, ನೆಂಟರಿಷ್ಟರ ಜೊತೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಆ ದಿನವನ್ನು ತಮ್ಮ ಜೀವನ ಪೂರ್ತಿ ಸಿಹಿ ನೆನಪುಗಳಾಗಿ ಉಳಿಸಿಕೊಳ್ಳಲು ಬಯಸುತ್ತಾರೆ.
ಆದರೆ ಮದುವೆ ವೇಳೆ ಛಾಯಾಗ್ರಾಹಕನನ್ನು ಕರೆದುಕೊಂಡು ಹೋಗಲು ಮರೆತಿದ್ದರಿಂದ ವರನನ್ನು ಮದುವೆಯಾಗಲು ವಧು ನಿರಾಕರಿಸಿದ್ದಾಳೆ.
ಕಾನ್ಪುರ ದೇಹತ್ನ ಮಂಗಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಾಸಿಸುವ ರೈತರೊಬ್ಬರು ತಮ್ಮ ಮಗಳ ವಿವಾಹವನ್ನು ಭೋಗ್ನಿಪುರದಲ್ಲಿ ವಾಸಿಸುವ ವ್ಯಕ್ತಿ ಒಬ್ಬರೊಂದಿಗೆ ನಿಗದಿಪಡಿಸಿದ್ದರು.
ಮದುವೆಗಾಗಿ ಎಲ್ಲಾ ಸಕಲ ಸಿದ್ಧತೆ ನಡೆಸಿ ವೇದಿಕೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಆದರೆ ಈ ಸುಂದರದ ಕ್ಷಣವನ್ನು ಸೆರೆಹಿಡಿಯಲು ಛಾಯಾಗ್ರಹಕನೇ ಇಲ್ಲವೆಂದು ತಿಳಿದ ವಧು ಮದುವೆಯನ್ನು ನಿರಾಕರಿಸಿ ವೇದಿಕೆಯಿಂದ ಮನೆಗೆ ಹಿಂದಿರುಗಿದ್ದಾಳೆ.
ಈ ವೇಳೆ ಹಲವಾರು ಮಂದಿ ವಧುವಿನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಇಂದು ನಮ್ಮ ಮದುವೆಯ ಬಗ್ಗೆಯೇ ಕಾಳಜಿ ವಹಿಸದ ವ್ಯಕ್ತಿ ಮುಂದೆ ನನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂದು ಪ್ರಶ್ನಿಸಿದ್ದಾರೆ.