ಮುಂಬೈ: ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳು ಹಾಗೂ ಅರೆ ಸರಕಾರಿ ಸಂಸ್ಥೆಗಳಲ್ಲಿನ ಎಲ್ಲ ಅಧಿಕೃತ ಸಂವಹನಗಳನ್ನು ಮರಾಠಿ ಭಾಷೆಯಲ್ಲೇ ನಡೆಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ರಾಜ್ಯ ಯೋಜನಾ ಇಲಾಖೆ ಹೊರಡಿಸಿರುವ ಈ ಅಧಿಸೂಚನೆ ಪ್ರಕಾರ, ಈ ನಿರ್ದೇಶನವನ್ನು ಪಾಲಿಸದ ಸರಕಾರಿ ಉದ್ಯೋಗಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಆದೇಶ ಪಾಲನೆಯಾಗದ ಕುರಿತು ಸೂಕ್ತ ಕ್ರಮಕ್ಕಾಗಿ ಕಚೇರಿಗಳು ಹಾಗೂ ಇಲಾಖಾ ಮುಖ್ಯಸ್ಥರ ಬಳಿ ದೂರು ದಾಖಲಿಸಬಹುದಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಅಧಿಸೂಚನೆಯ ಪ್ರಕಾರ, ಎಲ್ಲ ಮಾದರಿಯ ಸಂವಹನಗಳು, ಅಧಿಕೃತ ಸೂಚನಾ ಫಲಕಗಳು ಹಾಗೂ ರಾಜ್ಯದಲ್ಲಿನ ದಾಖಲೀಕರಣಕ್ಕೆ ಈ ಕಡ್ಡಾಯ ಆದೇಶ ಅನ್ವಯವಾಗಲಿದೆ. ವಿದೇಶೀಯರು ಹಾಗೂ ಮರಾಠಿಯೇತರ ರಾಜ್ಯಗಳ ಸಂದರ್ಶಕರನ್ನು ಹೊರತುಪಡಿಸಿ, ಉಳಿದೆಲ್ಲರೊಂದಿಗೆ ಅಧಿಕಾರಿಗಳು ಮರಾಠಿಯಲ್ಲೇ ಸಂವಾದ ನಡೆಸಬೇಕು ಎಂದೂ ಅಧಿಸೂಚನೆಯಲ್ಲಿ ಆದೇಶಿಸಲಾಗಿದೆ.
ಎಲ್ಲ ಸರಕಾರಿ ಕಚೇರಿಗಳು, ಮಹಾನಗರ ಪಾಲಿಕೆಗಳು, ರಾಜ್ಯ ನಿಗಮಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ಕಂಪ್ಯೂಟರ್ ಕೀಬೋರ್ಡ್ ಹಾಗೂ ಪ್ರಿಂಟರ್ ಗಳ ಮೇಲೆ ರೋಮನ್ ಲಿಪಿಯೊಂದಿಗೆ ಮರಾಠಿ ದೇವನಾಗರಿ ಲಿಪಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಹೊಸ ಉದ್ಯಮಗಳೂ ಕೂಡಾ ಇಂಗ್ಲಿಷ್ ಗೆ ಭಾಷಾಂತರಿಸದೆ ಮರಾಠಿ ಭಾಷೆಯಲ್ಲೇ ಹೆಸರನ್ನು ನೋಂದಾಯಿಸಬೇಕು ಎಂದೂ ಅಧಿಸೂಚನೆಯಲ್ಲಿ ನಿರ್ದೇಶನ ನೀಡಲಾಗಿದೆ.