Publish Date: Sat, 11 Nov 2023 (10:19 IST)
Updated Date: Sat, 11 Nov 2023 (10:21 IST)
ಮುಂಬೈನ ಬೈಂಗನ್‌ವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಕ್ಟೋಬರ್ 24ರಂದು ಬಾಲಕಿ ತನ್ನ ಮನೆಯ ಹತ್ತಿರದಲ್ಲಿರುವ ಟೈಲರ್ ಅಂಗಡಿಯಿಂದ ಬಟ್ಟೆ ತರಲು ಹೋಗಿದ್ದಳು. ಆದರೆ ಮನೆಗೆ ಹಿಂತಿರುಗಿರಲಿಲ್ಲ. ಆಕೆಯ ಕುಟುಂಬದವರು ಮಗಳು ನಾಪತ್ತೆಯಾದ ಪ್ರಕರಣವನ್ನು ದಾಖಲಿಸಿದ್ದರು. ಕಳೆದ ಅಕ್ಟೋಬರ್ 25 ರಂದು ಪೊಲೀಸರಿಗೆ 12 ವರ್ಷದ ಬಾಲಕಿಯ ಶವವೊಂದು ಸಿಕ್ಕಿತ್ತು.
ವೃತ್ತಿಯಲ್ಲಿ ಹೊಲಿಗೆ ಕೆಲಸ ಮಾಡುವ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಆಕೆಯನ್ನು ಅಮಾನುಷ ರೀತಿಯಲ್ಲಿ ಕೊಂದಿದ್ದಾನೆ. ಆಕೆಯ ದೇಹವನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ರಾತ್ರಿ ಪೂರ್ತಿ ತನ್ನ ಅಂಗಡಿಯಲ್ಲಿ ಬಚ್ಚಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಕಾಸೀಂ ಎಂದು ಗುರುತಿಸಲಾಗಿದೆ. ಬಾಲಕಿಯ ದೇಹವನ್ನು ತುಂಡರಿಸಿದ ಬಳಿಕ ತನ್ನ ಸ್ನೇಹಿತರೊಂದಿಗೆ ಆತ ತನ್ನ ಅಂಗಡಿಯಲ್ಲೇ ಮಲಗಿದ. ನಸುಕಿನ ಜಾವದಲ್ಲಿ ಎದ್ದ ಆತ ಬಾಲಕಿಯ ಶವವನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಅದನ್ನು ಕಸದ ತೊಟ್ಟಿಗೆಸೆದ.
ತನಿಖೆ ನಡೆಸಿದ ಪೊಲೀಸರಿಗೆ ಶವದ ಜತೆ ಬಟ್ಟೆಯ ತುಂಡುಗಳು ಸಿಕ್ಕಿದ್ದವು. ಅದರಲ್ಲಿ ಹಕೀಂ ಸಾಹೇಬ ಎಂದು ಬರೆದಿತ್ತು. ಈ ಸಾಕ್ಷ್ಯವನ್ನಿಟ್ಟುಕೊಂಡು ಊರಿನಲ್ಲಿದ್ದ ಎಲ್ಲ ಬಟ್ಟೆ ಹೊಲೆಯುವ ದರ್ಜಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕಾಸೀಂ ಸಿಕ್ಕಿ ಹಾಕಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಮೇಲೆ ಈ ಮೊದಲು ಸಹ ಅತ್ಯಾಚಾರ ನಡೆಸಿದ್ದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ.