ನವದೆಹಲಿ: ದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ನೀತಿ ಆಯೋಗ ಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಯಿಂದ ಹೊರನಡೆದಿದ್ದಾರೆ.
ತಾನು ಮಾತನಾಡುವಾಗ ಮೈಕ್ ಕಟ್ ಮಾಡಿದ್ದಾರೆ. ಕೇವಲ ಐದು ನಿಮಿಷ ಮಾತ್ರ ಮಾತನಾಡಲು ಅವಕಾಶ ನೀಡಲಾಗಿದೆ. ಎನ್ ಡಿಎ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತ್ರ ಮಾತನಾಡಲು ಹೆಚ್ಚು ಹೊತ್ತು ಅವಕಾಶ ನೀಡಲಾಗಿದೆ ಎಂದು ಮಮತಾ ಆಕ್ರೋಶ ಹೊರಹಾಕಿದ್ದಾರೆ.
ನಾನು ಸಭೆಯನ್ನು ಬಹಿಷ್ಕರಿಸಿದ್ದೇನೆ. ಚಂದ್ರಬಾಬು ನಾಯ್ಡು ಅವರಿಗೆ 20 ನಿಮಿಷ ಮಾತನಾಡಲು ಅವಕಾಶ ನೀಡಲಾಗಿದೆ. ಅಸ್ಸಾಂ, ಗೋವಾ, ಛತ್ತೀಸ್ ಘಡ ಮುಖ್ಯಮಮತ್ರಿಗಳು 10-12 ನಿಮಿಷ ಮಾತನಾಡಿದರು. ಆದರೆ ನನಗೆ ಕೇವಲ ಐದು ನಿಮಿಷ ಮಾತನಾಡಲು ಅವಕಾಶ ಸಿಕ್ಕಿತ್ತು. ಬಳಿಕ ನನ್ನ ಭಾಷಣ ನಿಲ್ಲಿಸಲಾಯಿತು. ಮೈಕ್ ಕಟ್ ಮಾಡಿದ್ದಾರೆ ಎಂದು ಮಮತಾ ಆರೋಪಿಸಿದ್ದಾರೆ.
ನೀತಿ ಆಯೋಗದ ಸಭೆಗೆ ಇಂಡಿಯಾ ಒಕ್ಕೂಟದ ಪಕ್ಷಗಳು ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳು ಬಹಿಷ್ಕಾರ ಹಾಕಿ ಸಭೆಗೇ ಹಾಜರಾಗಲಿಲ್ಲ. ಅದರಲ್ಲಿ ಕರ್ನಾಟಕ ಸಿಎಂ ಕೂಡಾ ಸೇರಿದ್ದಾರೆ. ಆದರೆ ಮಮತಾ ಇಂಡಿಯಾ ಒಕ್ಕೂಟವನ್ನು ಧಿಕ್ಕರಿಸಿ ಸಭೆಗೆ ಹಾಜರಾಗಿದ್ದರು.