ಮಹಾತ್ಮ ಗಾಂಧಿ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಆರ್‌ಎಸ್‌ಎಸ್ ನಡುವಿನ ವಿವಾದ ಮತ್ತಷ್ಟು ಕಗ್ಗಂಟಾಗಿದೆ. ರಾಹುಲ್ ಗಾಂಧಿ ಆರ್‌ಎಸ್ಸೆಸ್ ವಿರುದ್ಧ ಹೇಳಿಕೆ ಹಿಂತೆಗೆದುಕೊಳ್ಳಲು ಸುತಾರಾಂ ಒಪ್ಪುತ್ತಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಕ್ಷಮಾಪಣೆ ಕೇಳದೇ ರಾಜಿ ಮಾಡಿಕೊಳ್ಳಲು ಆರ್‌ಎಸ್ಸೆಸ್ ಒಪ್ಪುತ್ತಿಲ್ಲ. ಕ್ಷಮಾಪಣೆ ಕೇಳುವ ತನಕ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರಾಹುಲ್ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿರುವ ಮಹಾರಾಷ್ಟ್ರ ಮೂಲದ ಆರ್‌ಎಸ್‌ಎಸ್ ನಾಯಕ ರಾಜೇಶ್ ಮಹದೇವ್ ಕುಂಟೆ ಖಡಾಖಂಡಿತವಾಗಿ ಹೇಳಿದ್ದಾರೆ.
ಮಹಾತ್ಮಗಾಂಧಿಯನ್ನು ಆರ್‌ಎಸ್‌ಎಸ್ ಕೊಂದಿದೆ ಎಂಬ ತಮ್ಮ ಹೇಳಿಕೆಯನ್ನು ಭವಿಷ್ಯದಲ್ಲಿ ಪುನರಾವರ್ತಿಸುವುದಿಲ್ಲ ಎಂದು ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ಗೆ ಲಿಖಿತ ಭರವಸೆ ನೀಡಿದರೆ ಮಾತ್ರ ಪ್ರಕರಣ ಹಿಂತೆಗೆದುಕೊಳ್ಳುವುದಾಗಿ ಅವರು ಹೇಳಿದರು.
ಈಗ ಪ್ರಕರಣ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಆರ್‌ಎಸ್‌ಎಸ್ ಮಹಾತ್ಮ ಗಾಂಧಿಯನ್ನು ಕೊಂದಿದೆ ಎಂದು ರಾಹುಲ್ ಅರ್ಥವಾಗುವ ರೀತಿಯಲ್ಲಿ ಸ್ಪಷ್ಟವಾಗಿ ಟ್ವೀಟ್ ಮಾಡಿದ್ದಾರೆ ಎಂದು ಕುಂಟೆ ಹೇಳಿದರು.
ಈ ನಡುವೆ ಹಿರಿಯ ವಕೀಲ ಮತ್ತು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆಗಸ್ಟ್ 24ರಂದು ರಾಹುಲ್ ಆರ್‌ಎಸ್‌ಎಸ್ ಸಂಘಟನೆಯ ವಿರುದ್ಧ ಯಾವುದೇ ಆರೋಪ ಮಾಡಿಯೇ ಇಲ್ಲವೆಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದರು. ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರವನ್ನು ಉದಾಹರಿಸಿದ ಸಿಬಲ್ ಆರ್‌ಎಸ್‌ಎಸ್ ಜತೆ ಸಂಬಂಧ ಹೊಂದಿದ ಕೆಲವೇ ಮಂದಿಯ ವಿರುದ್ಧ ಅವರು ಆರೋಪ ಹೊರಿಸಿದ್ದಾರೆಂದು ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ