ನವದೆಹಲಿ: ಇಂದು ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿದ್ದು ಗುಜರಾತ್ ನಲ್ಲಿ ಪ್ರಧಾನಿ ಮೋದಿ, ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಪ್ರಮುಖರು ಬೆಳಿಗ್ಗೆಯೇ ಮತ ಚಲಾಯಿಸಿದ್ದಾರೆ.
ಗುಜರಾತ್ ನ ಅಹಮ್ಮದಾಬಾದ್ ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಧಾನಿ ಮೋದಿ ಮತದಾನ ಮಾಡಿದರು. ಪ್ರಧಾನಿ ಮೋದಿಯವರಿಗೆ ಗೃಹಸಚಿವ ಅಮಿತ್ ಶಾ ಸಾಥ್ ನೀಡಿದ್ದಾರೆ. ಮೋದಿ ಮತಗಟ್ಟೆಗೆ ಬರುತ್ತಿದ್ದಂತೇ ಜನ ಅವರ ಹೆಸರೆತ್ತಿ ಕೂಗಿದರು. ಇದೇ ಮೊದಲ ಬಾರಿಗೆ ಅವರು ಮತದಾನದ ಬಳಿಕ ಸಾರ್ವಜನಿಕ ಸ್ಥಳದಲ್ಲಿ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದರು.
ಮತದಾನ ಎನ್ನುವುದು ಸಾಮಾನ್ಯವಾದುದಲ್ಲ. ಶ್ರೇಷ್ಠ ದಾನ. ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೂ ಸೌಹಾರ್ದಯುತವಾಗಿ ಮಾತನಾಡಿಸಿದ ಅವರು ಚುನಾವಣೆ ಸಮಯದಲ್ಲಿ ಬಿಸಿಲು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದಿದ್ದಾರೆ.
ಇನ್ನು ಶಿವಮೊಗ್ಗದಲ್ಲಿ ಪುತ್ರ ರಾಘವೇಂದ್ರ ಜೊತೆಗೇ ಬಂದು ಮಾಜಿ ಸಿಎಂ ಯಡಿಯೂರಪ್ಪ ಮತ ಚಲಾಯಿಸಿದ್ದಾರೆ. ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ ಚಲಾಯಿಸಿದ್ದಾರೆ. ಬೆಳ್ಳಂ ಬೆಳಿಗ್ಗೆಯೇ ಗಣ್ಯರು ಮತ ಚಲಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ.