Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದ್ದರೂ ಖರ್ಗೆ ಮಾತ್ರ ಮೌನವಾಗಿದ್ದಾರೆ: ಸಂಸತ್ತಿನಲ್ಲಿ ಲೆಹರ್ ಸಿಂಗ್

Mallikarjun Kharge

Krishnaveni K

ನವದೆಹಲಿ , ಸೋಮವಾರ, 29 ಜುಲೈ 2024 (20:29 IST)
ನವದೆಹಲಿ: ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ 2024-25ರ ಮೇಲಿನೆ ಚರ್ಚೆಯ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಮಾಡಿದ ತಮ್ಮ ತೀಕ್ಷ್ಣ ಭಾಷಣದಲ್ಲಿ, ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ, ವಾಲ್ಮೀಕಿ ನಿಗಮ ಹಗರಣ ಹಾಗೂ MUDA ಭೂಹಗರಣದ ಭ್ರಷ್ಟಾಚಾರ ಆರೋಪ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಮತ್ತು ಮುಡಾ ಹಗರಣ ಕುರಿತಂತೆ ಕರ್ನಾಟಕದ ಮುಖ್ಯಮಂತ್ರಿಗಳ ಮೇಲಿರುವ ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಲಹರ್ ಸಿಂಗ್ ಎತ್ತಿ ತೋರಿಸಿದರು.
 
"ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದಲಿತರ ಕಲ್ಯಾಣಕ್ಕಾಗಿ ಉದ್ದೇಶಿಸಲಾದ 187 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದ್ದು, ನವದೆಹಲಿಯ ಕಾಂಗ್ರೆಸ್ ನಾಯಕತ್ವದ ಆದೇಶದ ಮೇರೆಗೆ ತೆಲಂಗಾಣ, ಆಂಧ್ರಪ್ರದೇಶಗಳ ಮೂಲಕ ಆ ಪಕ್ಷ ಬಳಸಿಕೊಂಡಿದೆ. ನಿಷ್ಪಕ್ಷಪಾತ ತನಿಖೆ ಮೂಲಕ ಈ ಅಕ್ರಮ ವರ್ಗಾವಣೆಗಳ ನಿಜವಾದ ವ್ಯಾಪ್ತಿ ಬಹಿರಂಗವಾಗಲಿದೆ" ಎಂದು ಲಹರ್ ಸಿಂಗ್ ಪ್ರತಿಪಾದಿಸಿದರು. ಒಂದು ವೇಳೆ ಸದನದಲ್ಲಿ ತಾವು ಹೇಳಿದ ವಿಷಯಗಳು ಸುಳ್ಳು ಎನ್ನುವುದು ಸಾಬೀತಾದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಲಹರ್ ಸಿಂಗ್ ನುಡಿದರು.
 
ದಲಿತರೊಬ್ಬರಿಗೆ ಸೇರಿದ ಭೂಮಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಬಂಧಿ ಪಡೆದುಕೊಂಡು, ನಂತರ ಅದನ್ನು ಮುಖ್ಯಮಂತ್ರಿಗಳ ಪತ್ನಿಗೆ ಉಡುಗೊರೆಯಾಗಿ ನೀಡಲಾಗಿದೆ. ನಂತರ ನಡೆದ ಬೆಳವಣಿಗೆಗಳಲ್ಲಿ, ಬದಲಿಯಾಗಿ ಮುಖ್ಯಮಂತ್ರಿಗಳ ಪತ್ನಿ ಪ್ರಶ್ನಾರ್ಹ ಸಂದರ್ಭಗಳಲ್ಲಿ ಮೈಸೂರಿನ ಐಷಾರಾಮಿ ಪ್ರದೇಶದಲ್ಲಿ 14 ದೊಡ್ಡ ನಿವೇಶನಗಳನ್ನು ಪಡೆದಿದ್ದಾರೆ. ಈಗ ಮುಖ್ಯಮಂತ್ರಿಗಳು ತಮ್ಮ ಸರ್ಕಾರದಿಂದಲೇ 62 ಕೋಟಿ ರೂ. ಆರ್ಥಿಕ ಪರಿಹಾರ ನೀಡುವಂತೆ ಕೇಳಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಂಸದರು ಹೇಳಿದರು.
 
ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಖರ್ಗೆ ಕೇಳಬೇಕಿತ್ತು
 
ದಲಿತರಿಗೆ ಆಗಿರುವ ಅನ್ಯಾಯದ ಬಗ್ಗೆ ಮೌನ ವಹಿಸಿದ್ದಕ್ಕಾಗಿ ಮತ್ತು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸದ ಕರ್ನಾಟಕದ ಗೌರವಾನ್ವಿತ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಲಹರ್ ಸಿಂಗ್ ನಿರಾಶೆ ವ್ಯಕ್ತಪಡಿಸಿದರು. "ಕರ್ನಾಟಕದಲ್ಲಿ ದಲಿತರ ನಿಧಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಅವರ ಕಲ್ಯಾಣಕ್ಕಾಗಿ ಮೀಸಲಾದ ಹಣವನ್ನು ರಾಜ್ಯ ಸರ್ಕಾರದ ಗ್ಯಾರಂಟಿಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ" ಎಂದು ಲಹರ್ ಸಿಂಗ್ ಹೇಳಿದರು. ಸೋನಿಯಾ ಗಾಂಧಿ ರಾಜಕೀಯಕ್ಕೆ ಬರುವುದಕ್ಕಿಂತ ಮುಂಚೆಯೇ ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸಿದ ಖರ್ಗೆ ಅವರಂತಹ ಹಿರಿಯ ನಾಯಕರು ಈಗ ಅವರಿಂದ ನಿರ್ದೇಶನ ಪಡೆಯುತ್ತಿರುವುದು ದುರದೃಷ್ಟಕರ ಎಂದು ಸಂಸದರು ಹೇಳಿದರು.
 
ಹಗರಣಗಳನ್ನು ಬಯಲಿಗೆಳೆದ ಆರ್‌ಟಿಐ ಕಾರ್ಯಕರ್ತರನ್ನು ಕಾಂಗ್ರೆಸ್ ಸರಕಾರ ಬಂಧಿಸಿದೆ
 
ಪಾರದರ್ಶಕತೆಗಾಗಿ ಆರ್‌ಟಿಐ ಕಾಯ್ದೆಯನ್ನು ತರುವಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಪಾತ್ರವನ್ನು ಹೊಗಳಿದ ಲಹರ್ ಸಿಂಗ್, ಮುಡಾ ಹಗರಣವನ್ನು ಬಹಿರಂಗಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆರ್‌ಟಿಐ ಕಾರ್ಯಕರ್ತರನ್ನು  ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಂಧಿಸಿದೆ ಎನ್ನುವ ಮೂಲಕ ವಿಪರ್ಯಾಸವನ್ನು ಎತ್ತಿ ತೋರಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಮೇಕೆದಾಟು ಅಣೆಕಟ್ಟು: ನಮಗಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ: ಮುಖ್ಯಮಂತ್ರಿ ಸಿದ್ದರಾಮಯ್ಯ