ನವದೆಹಲಿ: ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ, ಸೇರ್ಪಡೆ ಇತ್ಯಾದಿ ನವೀಕರಣ ಕೆಲಸಗಳನ್ನು ಉಚಿತವಾಗಿ ಮಾಡಲು ಇಂದೇ ಕೊನೆಯ ದಿನಾಂಕವಾಗಿದ್ದು ತಕ್ಷಣವೇ ಮಾಡಿಕೊಳ್ಳಿ.
ಆಧಾರ್ ಅಪ್ ಡೇಟ್ ಉಚಿತವಾಗಿ ಮಾಡಲು ಇಂದಿನವರೆಗೆ ಅವಕಾಶ ನೀಡಲಾಗಿದೆ. ಆನ್ ಲೈನ್ ಮೂಲಕ ಅಥವಾ ಆಧಾರ್ ಕೇಂದ್ರಗಳಿಗೆ ತೆರಳಿ ಉಚಿತವಾಗಿ ನವೀಕರಣ ಮಾಡಿಸಿಕೊಳ್ಳಬಹುದಾಗಿದೆ. ಆಧಾರ್ ಕಾರ್ಡ್ ಮಾಡಿಸಿಕೊಂಡು 15 ವರ್ಷ ಮೇಲ್ಪಟ್ಟಿದ್ದರೆ ನವೀಕರಣ ಮಾಡಬಹುದು.
ಇನ್ನು ಕೆಲವರಿಗೆ ಹೆಸರಿನಲ್ಲಿ ಅಕ್ಷರ ದೋಷ ಅಥವಾ ವಿಳಾಸದಲ್ಲಿ ತಪ್ಪಾಗಿದ್ದರೆ ಅದನ್ನು ಉಚಿತವಾಗಿ ಸರಿಪಡಿಸಿಕೊಳ್ಳಲು ಇಂದು ಕೊನೆಯ ಅವಕಾಶವಾಗಲಿದೆ. ಮನೆ ಬದಲಾಯಿಸಿಕೊಂಡಿದ್ದಲ್ಲಿ, ಮದುವೆ ಬಳಿಕ ಮಹಿಳೆಯರು ಗಂಡನ ಮನೆಯ ವಿಳಾಸಕ್ಕೆ ಶಿಫ್ಟ್ ಆಗಬೇಕಾಗಿದ್ದಲ್ಲಿ ನವೀಕರಣ ಮಾಡಿಸಿಕೊಳ್ಳಬಹುದು. ಇದಾದ ಬಳಿಕ ನೀವು ಸರಿಪಡಿಸಿಕೊಳ್ಳಬೇಕಾದಲ್ಲಿ ಶುಲ್ಕ ಪಾವತಿಸಬೇಕಾಗುತ್ತದೆ. ಹೀಗಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಮೈ ಆಧಾರ್ ಆಪ್ ಗೆ ಹೋಗಿ ಆನ್ ಲೈನ್ ಮೂಲಕ ತಿದ್ದುಪಡಿ ಮಾಡಬಹುದು. ಇದಕ್ಕಾಗಿ ನಿಮ್ಮ ಬಳಿ ಈಗಿರುವ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಬೇಕಾಗುತ್ತದೆ. ಆಧಾರ್ ಅಪ್ ಡೇಟ್ ಮಾಡಿಸಿಕೊಳ್ಳುವುದು ಅಗತ್ಯವಾಗಿದ್ದು ಇಂದಿನ ನಂತರ ಕೂಡಾ ನೀವು ಶುಲ್ಕ ಪಾವತಿಸಿ ಆಧಾರ್ ಸೆಂಟರ್ ಗಳಲ್ಲಿ ಅಪ್ ಡೇಟ್ ಮಾಡಿಸಿಕೊಳ್ಳಬಹುದಾಗಿದೆ.