ಹೊಸದಿಲ್ಲಿ, ಅ. 20 : ರೈತರ ಪ್ರತಿಭಟನೆ ಸಂದರ್ಭ ನಾಲ್ವರು ರೈತರು ಸೇರಿದಂತೆ 8 ಮಂದಿ ಹತ್ಯೆಯಾದ ಅಕ್ಟೋಬರ್ 3ರಂದು ಲಖಿಂಪುರ ಖೇರಿಯಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣದ ವಿಚಾರಣೆಯನ್ನು ಬುಧವಾರ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
8 ಮಂದಿಯನ್ನು ಬರ್ಬರವಾಗಿ ಹತ್ಯೆ ನಡೆಸಿದ ಕುರಿತಂತೆ ಉತ್ತರಪ್ರದೇಶ ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಅಕ್ಟೋಬರ್ 8ರಂದು ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.
ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿ ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ. ಘಟನೆ ಕುರಿತು ಸಿಬಿಐ ಸೇರಿದಂತೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಎರಡೂ ಕಡೆಯ ವಕೀಲರು ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದ ಬಳಿಕ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.