ನವದೆಹಲಿ : ಭಾರತ-ಅಮೆರಿಕಾ ರಾಷ್ಟ್ರದ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ಅಮೇರಿಕಾ ಭೇಟಿಯು ಒಂದು ಉತ್ತಮ ಸಂದರ್ಭವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ.
ಬೈಡೆನ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಮೆರಿಕಾಕ್ಕೆ ಹೊರಡಲಿರುವ ಮೋದಿಯವರು, ಕ್ವಾಡ್ ಶೃಂಗ ಸಮ್ಮೇಳನ, ವಿಶ್ವಸಂಸ್ಥೆ 76ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಜೋ ಬೈಡೆನ್ ಜತೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಹೀಗಾಗಿ ಮೋದಿ-ಬೈಡೆನ್ ಭೇಟಿ ಮಹತ್ವ ಪಡೆದುಕೊಂಡಿದೆ.
ಇದರಂತೆ ಇಂದು ಅಮೆರಿಕಾಗೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೋವಿಡ್ -19 ಸಾಂಕ್ರಾಮಿಕ, ಭಯೋತ್ಪಾದನೆ ನಿಗ್ರಹ, ಹವಾಮಾನ ಬದಲಾವಣೆ ಮತ್ತು ಇತರ ಪ್ರಮುಖ ವಿಚಾರಗಳನ್ನು ಕೇಂದ್ರೀಕರಿಸಿ ಭಾಷಣ ಮಾಡುವ ಮೂಲಕ ಭೇಟಿಯನ್ನು ಮುಕ್ತಾಯಗೊಳಿಸಲಿದ್ದೇನೆಂದು ಹೇಳಿದ್ದಾರೆ.
ಅಮೇರಿಕಾ ಸಂಯುಕ್ತ ಸಂಸ್ಥಾನದ ಅತ್ಯುನ್ನತ ಅಧ್ಯಕ್ಷ ಜೋ ಬಿಡೆನ್ ಅವರ ಆಹ್ವಾನದ ಮೇರೆಗೆ 22-25 ಸೆಪ್ಟೆಂಬರ್ ರಂದು ಅಮೆರಿಕಾಗೆ ಭೇಟಿ ನೀಡುತ್ತೇನೆ. ಭೇಟಿ ವೇಳೆ ಗ್ಲೋಬಲ್ ಪಾರ್ಟನರ್ಶಿಪ್ ಬಗ್ಗೆ ಸಮಗ್ರವಾಗಿ ಅಧ್ಯಕ್ಷ ಜೋ ಬೈಡನ್ ಜೊತೆ ಚರ್ಚಿಸುತ್ತೇನೆ. ಪರಸ್ಪರ ಆಸಕ್ತಿ ವಿಷಯಗಳ ಜೊತೆಗೆ ಗ್ಲೋಬಲ್ ಸಮಸ್ಯೆ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ವಿನಿಮಯ ಮಾಡಿಕೊಳ್ಳುವುದು. ಜೊತೆಗೆ ಯುಎಸ್ಎ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರ ಭೇಟಿಯನ್ನೂ ಕೂಡ ಎದುರು ನೋಡುತ್ತಿದ್ದೇನೆ. ಹ್ಯಾರಿಸ್ ಜೊತೆ ಜಾಗತಿಕ ವಿಚಾರಗಳು ಮತ್ತು ಎರಡು ದೇಶಗಳ ಪರಸ್ಪರ ಸಹಕಾರದ ಬಗ್ಗೆ ಚರ್ಚೆಯಾಗಲಿದೆ. ಜೊತೆಗೆ ಅಧ್ಯಕ್ಷ ಜೋ ಬೈಡನ್ ನೇತೃತ್ವದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲೂ ಭಾಗಿಯಾಗಲಿದ್ದೇನೆ. ಇದೇ ಮೊದಲ ಬಾರಿಗೆ ಕ್ವಾಡ್ ಲೀಡರ್ಗಳ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಮ್ಯಾರಿಸನ್ ಹಾಗೂ ಜಪಾನ್ ಪ್ರಧಾನಿ ಸುಗಾ ಅವರನ್ನು ಭೇಟಿ ಮಾಡಲಿದ್ದು, ಉಭಯ ನಾಯಕರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದಿದ್ದಾರೆ.