ಕೋಲ್ಕತ್ತಾ: ಇಲ್ಲಿನ ಲಾ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸರಿಗೆ ಸಿಸಿಟಿವಿ ಫೂಟೇಜ್ ಪ್ರಮುಖ ಸಾಕ್ಷ್ಯವಾಗಿ ಸಿಕ್ಕಿದೆ. ಸಿಸಿಟಿವಿಯಲ್ಲಿ ದಾಖಲಾಗಿದೆ ಭಯಾನಕ ದೃಶ್ಯಗಳು.
24 ವರ್ಷದ ಕಾನೂನು ವಿದ್ಯಾರ್ಥಿನಿ ಮೇಲೆ ಅದೇ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಟಿಎಂಸಿ ಕಾರ್ಯಕರ್ತ ಮನೋಜಿತ್ ಮಿಶ್ರಾ ಹಾಗೂ ಗ್ಯಾಂಗ್ ಸೇರಿಕೊಂಡು ರೇಪ್ ನಡೆಸಿದೆ. ಇದಕ್ಕೆ ಕಾಲೇಜಿನ ಸೆಕ್ಯುರಿಟಿ ಗಾರ್ಡ್ ಕೂಡಾ ನೆರವಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಮರುದಿನ ಅಂದರೆ ಜೂನ್ 26 ರಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಳು. ದೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಸೇರಿದಂತೆ ಇಬ್ಬರು ತನ್ನನ್ನು ಘಟನೆ ನಡೆದ ಕೊಠಡಿಗೆ ಎಳೆದೊಯ್ದಿದ್ದರು ಎಂದಿದ್ದಳು. ಅದರಂತೆ ಸಿಸಿಟಿವಿ ಫೂಟೇಜ್ ನಲ್ಲೂ ಈ ದೃಶ್ಯ ಕಂಡುಬಂದಿದೆ. ಬಳಿಕ ಆಕೆಯನ್ನು ಕೊಠಡಿಗೆ ಕರೆದೊಯ್ದು ಕೃತ್ಯವೆಸಗಲಾಗಿದೆ.
ಸೆಕ್ಯುರಿಟಿ ಗಾರ್ಡ್ ಮತ್ತು ಇನ್ನೋರ್ವ ವಿದ್ಯಾರ್ಥಿ ಹುಡುಗಿಯನ್ನು ಬಲವಂತವಾಗಿ ಎಳೆದೊಯ್ಯುವ ದೃಶ್ಯವಿದೆ. ಕೃತ್ಯದಲ್ಲಿ ಈಗ ಅಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳೂ ಭಾಗಿಯಾಗಿದ್ದರು. ನಾವು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.