ಬೆಂಗಳೂರು: ಕೇರಳದಾದ್ಯಂತ ನಿಫಾ ವೈರಸ್ ಭೀತಿಯಿದ್ದು, ಈ ಒಂದು ಜಿಲ್ಲೆಗೆ ತೆರಳುವುದು ಅಪಾಯವನ್ನು ಆಹ್ವಾನಿಸಿಕೊಂಡಂತೆ. ಹೀಗಾಗಿ ಈ ಜಿಲ್ಲೆಗೆ ಹೋಗಬೇಡಿ ಎಂದು ಕರ್ನಾಟಕದ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ಆತಂಕ ಹೆಚ್ಚಾಗಿದೆ. ಜುಲೈ 21 ರಂದು ನಿಫಾ ವೈರಸ್ ಗೊಳಗಾಗಿದ್ದ ಬಾಲಕನೊಬ್ಬ ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿಗೆ ದಾಖಲಾಗುವ ಮುನ್ನವೇ ಸಾವನ್ನಪ್ಪಿದ್ದಾನೆ. ಈ ಹಿನ್ನಲೆಯಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಇದುವರೆಗೆ ಕರ್ನಾಟಕದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಹಾಗಿದ್ದರೂ ಕೇರಳದ ಗಡಿ ಭಾಗ ಹಂಚಿಕೊಂಡಿರುವ ರಾಜ್ಯ ಕರ್ನಾಟಕವಾಗಿದೆ. ಇಲ್ಲಿಂದ ಕೇರಳಕ್ಕೆ ಮತ್ತು ಕೇರಳದಿಂದ ಇಲ್ಲಿಗೆ ಸಾಕಷ್ಟು ಜನ ಬಂದು ಹೋಗುತ್ತಿರುತ್ತಾರೆ. ಹೀಗಾಗಿ ರೋಗ ಹರಡುವ ಭೀತಿ ಹೆಚ್ಚು.
ನಿಫಾ ವೈರಸ್ ಬಾವಲಿಯಿಂದ ಹರಡುವ ರೋಗವಾದರೂ ಇದು ಮನುಷ್ಯನಿಗೆ ತಗುಲಿದರೆ ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕವಾಗಿ ಹರಡಲಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದ ಮಲಪ್ಪುರಂ ಜಿಲ್ಲೆಗೆ ಸದ್ಯಕ್ಕೆ ತೆರಳದಂತೆ ಕರ್ನಾಟಕ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೆ, ಮಲಪ್ಪುರಂ ಜಿಲ್ಲೆ ನಿಫಾ ವೈರಸ್ ಮುಕ್ತ ಎಂದು ಖಚಿತವಾಗುವವರೆಗೂ ಹೋಗಬೇಡಿ ಎಂದು ಸೂಚನೆ ನೀಡಿದೆ.