ಕಠ್ಮಂಡು : ಸಿಪಿಎನ್-ಮಾವೋವಾದಿ ಸೆಂಟರ್ ಅಧ್ಯಕ್ಷ ಪುಷ್ಪ ಕಮಲ್ ದಹಾಲ್ ಪ್ರಚಂಡ ನೇಪಾಳದ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಈ ಮೂಲಕ 3 ಬಾರಿ ನೇಪಾಳದ ಪ್ರಧಾನಿ ಪಟ್ಟಕ್ಕೇರಿದಂತಾಗಿದೆ.
ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ನೂತನ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರನ್ನು ಇಂದು ನೇಮಕ ಮಾಡಿದ್ದಾರೆ.
ಪ್ರಚಂಡ ಅವರು ಪಕ್ಷೇತರ ಸಂಸದರು ಸೇರಿದಂತೆ 169 ಸಂಸದರ ಬೆಂಬಲವಿದೆ ಎಂದು ತಿಳಿಸಿದ ಬಳಿಕ ಪ್ರಧಾನಿಯಾಗಿ ಆಯ್ಕೆ ಮಾಡಲು ಅಧ್ಯಕ್ಷರು ಒಪ್ಪಿದರು.
ಇದಕ್ಕೂ ಮೊದಲು ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ನೇತೃತ್ವದಲ್ಲಿ ಸಿಪಿಎನ್-ಯುಎಂಎಲ್, ಸಿಪಿಎನ್-ಎಂಸಿ, ರಾಷ್ಟ್ರೀಯ ಸ್ವತಂತ್ರ ಪಕ್ಷ ಮತ್ತು ಇತರ ಪಕ್ಷಗಳೊಂದಿಗೆ ಮಹತ್ವದ ಸಭೆ ನಡೆಯಿತು. ಇದರಲ್ಲಿ ಪ್ರಚಂಡ ನೇತೃತ್ವದಲ್ಲಿ ಸರ್ಕಾರ ರಚಿಸಲು ಒಪ್ಪಿಗೆ ನೀಡಿದ ಬಳಿಕ ಮೈತ್ರಿ ಸರ್ಕಾರ ರಚನೆಯಾಗಿದೆ.