ನವದೆಹಲಿ: ಜಸ್ಟಿಸ್ ಚಂದ್ರಚೂಡ್ ನಿವೃತ್ತಿಯಾಗುತ್ತಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಗೆ ನೂತನ ಮುಖ್ಯ ನ್ಯಾಯಾಧೀಶರಾಗಿ ಜಸ್ಟಿಸ್ ಸಂಜೀವ್ ಖನ್ನಾ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರ ಹಿನ್ನಲೆ ಬಗ್ಗೆ ಇಲ್ಲಿದೆ ವಿವರ.
ಸುಪ್ರೀಂಕೋರ್ಟ್ ನ 51 ನೇ ಮುಖ್ಯ ನ್ಯಾಯಾಧೀಶರಾಗಿ ಸಂಜೀವ್ ಖನ್ನಾ ಇಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಅವರ ಅಧಿಕಾರಾವಧಿ ಒಟ್ಟು ಆರು ತಿಂಗಳು ಇರಲಿದೆ.
ಸುಪ್ರೀಂಕೋರ್ಟ್ ನ ಎರಡನೇ ಹಿರಿಯ ನ್ಯಾಯಾಧೀಶರಾದ ಅವರು ಚಂದ್ರಚೂಡ್ ಅವರಿಂದ ನಾಮನಿರ್ದೇಶನಗೊಂಡು ಹೊಸ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. 1960 ರಲ್ಲಿ ಜನಿಸಿದ ಸಂಜೀವ್ ಖನ್ನಾ 1983 ರಲ್ಲಿ ಡೆಲ್ಲಿ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು.
ಜಸ್ಟಿಸ್ ಖನ್ನಾಗೆ ಆದಾಯ ತೆರಿಗೆ ವಿಭಾಗದ ಹಿರಿಯ ಸಲಹೆಗಾರನಾಗಿ ಕೆಲಸ ಮಾಡಿದ ಅನುಭವಿಯಾಗಿದ್ದು, ಕಾನೂನಿನ ವಿವಿಧ ಮಜಲುಗಳಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. 2005 ರಲ್ಲಿ ದೆಹಲಿ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾದ ಅವರು 2006 ರಿಂದ ಖಾಯಂ ನ್ಯಾಯಾಧೀಶರಾದರು. 2019 ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದರು. ಯಾವುದೇ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗದೇ ಇದೀಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗುವ ಯೋಗ ಅವರದ್ದಾಗಿದೆ.
ಈ ಹಿಂದೆ ದೆಹಲಿ ಸಿಎಂ ಆಗಿದ್ದಾಗ ಬಂಧನದಲ್ಲಿದ್ದ ಅರವಿಂದ್ ಕೇಜ್ರಿವಾಲ್ ಗೆ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮಧ್ಯಂತರ ಜಮೀನು ನೀಡಿದ್ದರು. ಮನೀಶ್ ಸಿಸೋಡಿಯಾಗೆ ಜಾಮೀನು ಮಂಜೂರು ಮಾಡಿದ ಖ್ಯಾತಿಯೂ ಅವರದ್ದಾಗಿದೆ.ಇವರ ತಂದೆ, ಚಿಕ್ಕಪ್ಪ ಕೂಡಾ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದವರೇ. ಇದೀಗ ಸಂಜೀವ್ ಖನ್ನಾ ದೇಶದ ಪರಮೋಚ್ಛ ನ್ಯಾಯಾಲಯದ ಚುಕ್ಕಾಣಿ ಹಿಡಿಯುತ್ತಿದ್ದಾರೆ.