ಐಆರ್‌ಸಿಟಿಸಿ ವೆಬ್‌ಸೈಟ್ ಹ್ಯಾಕ್ ಆಗಿದೆ ಎಂಬ ವರದಿಯನ್ನು ರೈಲ್ವೆ ಸಚಿವಾಲಯ ತಳ್ಳಿ ಹಾಕಿದೆ. ಐಆರ್‌ಸಿಟಿಸಿ ವೆಬ್‌ಸೈಟ್ ಸುರಕ್ಷಿತವಾಗಿದ್ದು, ಹ್ಯಾಕ್ ಆಗಿಲ್ಲ ಸಿಆರ್‌ಐಎಸ್ ಮತ್ತು ಐಆರ್‌ಸಿಟಿಸಿ ತಾಂತ್ರಿತ ತಂಡಗಳಿಗೆ ಅಂತಹ ಯಾವುದೇ ಪ್ರಯತ್ನಗಳು ನಡೆದ ಕುರುಹು ಸಿಕ್ಕಿಲ್ಲ, ಇದು ಕೇವಲ ವದಂತಿ ಎಂದು ಸಚಿವಾಲಯ ಸ್ಪಷ್ಟ ಪಡಿಸಿದೆ.
ವೆಬ್‌ಸೈಟ್ ಹ್ಯಾಕ್ ಆಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ 6 ಮಂದಿ ಸದಸ್ಯರುಳ್ಳ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ನೀಡಿರುವ ಪ್ರಾಥಮಿಕ ವರದಿಗಳ ಪ್ರಕಾರ ಅಂತಹ ಯಾವ ಪ್ರಯತ್ನಗಳು ನಡೆದಿಲ್ಲ ಎಂದು ತಿಳಿದು ಬಂದಿದೆ.
ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿ ಲಕ್ಷಾಂತರ ನಾಗರಿಕರ ವೈಯಕ್ತಿಕ ಮಾಹಿತಿ ಕಳುವು ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರು ನೀಡುವ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ವಿವರಣೆಯನ್ನು ನೀಡಿರುತ್ತಾರೆ. ಇಂತಹ 1 ಕೋಟಿಗೂ ಹೆಚ್ಚು ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಪಿಎನ್ಆರ್ ಸ್ಟೇಟಸ್‌ನಿಂದ ಹ್ಯಾಕ್ ಮಾಡಿ ಕದ್ದು ಪ್ರತಿಯೊಂದು ಡೇಟಾವನ್ನು 15,000 ರೂಪಾಯಿಗೆ ಮಾರಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ದಾಖಲೆ ಕದ್ದು ಕಾರ್ಪೋರೇಟ್ ಕಂಪನಿಗಳಿಗೆ ಮಾರಬಹುದು ಅಥವಾ ಫೋರ್ಜರಿ ದಾಖಲೆ ಸೃಷ್ಟಿಸಿ ಬಳಸಬಹುದೆಂಬ ಆತಂಕ ಎದುರಾಗಿತ್ತು.