ನವದೆಹಲಿ: 2008 ರಲ್ಲಿ ಮುಂಬೈ ಮೇಲೆ ಪಾಕ್ ಪೋಷಿತ ಉಗ್ರರು ದಾಳಿ ಮಾಡಿ ನೂರಾರು ಜನರ ಸಾವಿಗೆ ಕಾರಣರಾಗಿದ್ದರು. ಇದಾದ ಎರಡೇ ವರ್ಷಕ್ಕೆ ಅಂದಿನ ಯುಪಿಎ ಸರ್ಕಾರ ಪಾಕಿಸ್ತಾನಕ್ಕೆ ನೆರೆ ಪರಿಹಾರವಾಗಿ 25 ಮಿಲಿಯನ್ ಡಾಲರ್ ಹಣ ನೀಡಿತ್ತು. ಈ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2008 ರಲ್ಲಿ ಮುಂಬೈನ ತಾಜ್ ಹೋಟೆಲ್ ಮತ್ತು ಇತರೆ ಸ್ಥಳದ ಮೇಲೆ ನಡೆದ ಉಗ್ರರ ದಾಳಿಯನ್ನು ಯಾವ ಭಾರತೀಯರೂ ಮರೆಯಲಾಗದು. ಸುಮಾರು 150 ಮಂದಿ ಅಂದಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಆದರೆ ಆಗ ಭಾರತ ಸರ್ಕಾರ ಈಗಿನಂತೆ ಪರಿಣಾಮಕಾರಿಯಾದ ಕ್ರಮ ಕೈಗೊಂಡಿರಲಿಲ್ಲ.
ಇದಾಗಿ ಎರಡೇ ವರ್ಷದಲ್ಲಿ ಅಂದರೆ 2010 ರಲ್ಲಿ ಪಾಕಿಸ್ತಾನ ನೆರೆ ಬಂದು ಸಂಕಷ್ಟಕ್ಕೀಡಾಗಿತ್ತು. ಆಗ ಯುಪಿಎ ಸರ್ಕಾರ ಪಾಕಿಸ್ತಾನಕ್ಕೆ 25 ಮಿಲಿಯನ್ ಡಾಲರ್ ಪರಿಹಾರ ಹಣ ಘೋಷಿಸಿತ್ತು. ನೆರೆಯ ರಾಷ್ಟ್ರ ಸಂಕಷ್ಟದಲ್ಲಿರುವಾಗ ಸಹಾಯ ಮಾಡುವುದರಿಂದ ಏಷ್ಯಾ ರಾಷ್ಟ್ರಗಳ ಬಲವರ್ಧನೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿತ್ತು. ಆಗ ವಿದೇಶಾಂಗ ಸಚಿವರಾಗಿದ್ದ ಎಸ್ಎಂ ಕೃಷ್ಣ ಸಂಸತ್ ನಲ್ಲಿ ಸಹಾಯ ಹಣ ಘೋಷಿಸುವ ವಿಡಿಯೋವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಟ್ವೀಟ್ ಮಾಡಿದ್ದರು.
ಅಂದು ಪಾಕಿಸ್ತಾನದ ಬುದ್ಧಿ ಗೊತ್ತಿದ್ದೂ, ಮುಂಬೈ ದಾಳಿಯ ಆರೋಪಿ ಉಗ್ರ ಅಜ್ಮಲ್ ಕಸಬ್ ಇನ್ನೂ ವಶದಲ್ಲಿದ್ದಾಗಲೇ ಯುಪಿಎ ಸರ್ಕಾರ ಹಣ ಸಹಾಯ ಮಾಡಿತ್ತು. ಈಗ ಮೋದಿ ಸರ್ಕಾರ ಪರಿಣಾಮ ಕಾರಿ ಕ್ರಮಕೈಗೊಂಡರೂ ಕಾಂಗ್ರೆಸ್ ಅನುಮಾನಿಸುತ್ತಿದೆ ಎಂದು ಟೀಕಿಸಿದ್ದಾರೆ.