ನವದೆಹಲಿ: ಭಾರತವು ಜತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಐಎಂಎಫ್ ದತ್ತಾಂಶ ಆಧಾರದಲ್ಲಿ ಈತನಕ ನಾಲ್ಕನೇ ಸ್ಥಾನದಲ್ಲಿದ್ದ ಜಪಾನ್ ಐದನೇ ಸ್ಥಾನಕ್ಕೆ ಜಾರಿದೆ.
ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ (ಸಿಇಒ) ಬಿ.ವಿ.ಆರ್ ಸುಬ್ರಹ್ಮಣ್ಯಂ ಈ ಕುರಿತು ಮಾಹಿತಿ ನೀಡಿದ್ದು, ಜಪಾನ್ ದೇಶವನ್ನು ಹಿಂದಿಕ್ಕಿ ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಘೋಷಿಸಿದ್ದಾರೆ.
ಒಟ್ಟಾರೆ ಭೌಗೋಳಿಕ ರಾಜಕೀಯ ಹಾಗೂ ಆರ್ಥಿಕ ವಾತಾವರಣವು ಭಾರತಕ್ಕೆ ಅನುಕೂಲಕರವಾಗಿದೆ. ಭಾರತ ಈಗ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ನಮ್ಮ ದೇಶ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪಿದೆ ಎಂದು ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಐಎಂಎಫ್ ದತ್ತಾಂಶವನ್ನು ಉಲ್ಲೇಖಿಸಿದ ಸುಬ್ರಹ್ಮಣ್ಯಂ, ಭಾರತದ ಆರ್ಥಿಕತೆ ಜಪಾನ್ ದೇಶವನ್ನು ಹಿಂದಿಕ್ಕಿದೆ. ಅಮೆರಿಕ, ಚೀನಾ ಮತ್ತು ಜರ್ಮನಿ ಮಾತ್ರ ಭಾರತಕ್ಕಿಂತ ದೊಡ್ಡ ಆರ್ಥಿಕತೆಯಾಗಿದೆ. ನಾವು ನಮ್ಮ ಯೋಜನೆಗಳಲ್ಲಿ ಸ್ಥಿರತೆ ಕಾಪಾಡಿಕೊಂಡರೆ ಮುಂದಿನ 2.5-3 ವರ್ಷಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ.