Select Your Language

Notifications

webdunia
webdunia
webdunia
webdunia

ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಸಮಸ್ಯೆ

ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಸಮಸ್ಯೆ
ನವದೆಹಲಿ , ಮಂಗಳವಾರ, 24 ಆಗಸ್ಟ್ 2021 (08:27 IST)
ನವದೆಹಲಿ (ಆ. 24):  ಆದಾಯ ತೆರಿಗೆ ಇಲಾಖೆ ಹೊಸ ಇ- ಫೈಲಿಂಗ್ ವೆಬ್ಸೈಟ್ನಲ್ಲಿ (e-filing portal ) ಸಮಸ್ಯೆ ಹಾಗೂ ಜಾಲತಾಣದಲ್ಲಿ ತೆರಿಗೆದಾರರು (taxpayers) ಎದುರಿಸುತ್ತಿರುವ ಸಮಸ್ಯೆಗಳನ್ನು ಇನ್ನು ಸೆಪ್ಟಂಬರ್ 15ರೊಳಗೆ ಸರಿಪಡಿಸಲಾಗುವುದು ಎಂದು ಇನ್ಫೋಸಿಸ್ (Infosys) ತಿಳಿಸಿದೆ.

ಈ ಮೂಲಕ ಪೋರ್ಟಲ್ ಅನ್ನು ತೆರಿಗೆದಾರರ ಸ್ನೇಹಿಯಾಗಿ ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ತಂಡ ತಿಳಿಸಿದೆ. ಸಮನ್ಸ್ ಜಾರಿ ಬೆನ್ನಲ್ಲೆ ಇಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್  ಅವರನ್ನು ಇನ್ಫೋಸಿಸ್ ತಂಡ ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಿದರು. ಈ ವೇಳೆ ಹೊಸ ಪೋರ್ಟಲ್ ಆರಂಭವಾದಾಗಿನಿಂದ ಅಂದರೆ ಕಳೆದ ಎರಡೂವರೆ ತಿಂಗಳಿನಿಂದ ಪದೇ ಪದೇ ಉದ್ಭವಿಸುತ್ತಿರುವ ಈ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂಬಂಧ ವಿವರಣೆ ನೀಡಿದ ತಂಡ ಶೀಘ್ರದಲ್ಲಿಯೇ ಈ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಈ ವೇಳೆ ಹಣಕಾಸು ಸಚಿವರು ಸಮಸ್ಯೆ ಬಗೆಹರಿಸಲು ಇನ್ಫೋಸಿಸ್ನಿಂದ ಹೆಚ್ಚಿನ ಸಂಪನ್ಮೂಲವನ್ನು ನೀಡಬೇಕು. ಜೊತೆಗೆ ಅಧಿಕ ಇದರ ನಿವಾರಣೆಗೆ ಅಧಿಕ ಪ್ರಯತ್ನವನ್ನು ನಡೆಸುವಂತೆ ತಿಳಿಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಇನ್ಫೋಸಿಸ್ ಎಂಡಿ ಹಾಗೂ ಸಿಇಒ ಸಲೀಲ್ ಪರೇಖ್ ಕಾರ್ಯ ನಿರ್ವಹಣೆಯಲ್ಲಿನ ವಿಳಂಬದಿಂದಾಗಿ ಈ ಸಮಸ್ಯೆ ಉಂಟಾಗುತ್ತಿದೆ ಎಂಬುದರ ಕುರಿತು ಸಚಿವರಿಗೆ ಮನವರಿಕೆ ಮಾಡಿದರು.
ಪೋರ್ಟಲ್ ಸುಗಮ ನಿರ್ವಹಣೆಗಾಗಿ ತಮ್ಮ ತಂಡ ಎಲ್ಲಾ ರೀತಿಯ ಕಾರ್ಯ ನಿರ್ವಹಣೆ ಮಾಡುತ್ತಿದೆ.  ತಂಡದಲ್ಲಿ 750ಕ್ಕೂ ಹೆಚ್ಚು ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಇನ್ಫೋಸಿಸ್ನ ಸಿಒಒ ಪ್ರವೀಣ್ ರಾವ್ ಈ ಯೋಜನೆಯನ್ನು ವೈಯಕ್ತಿಕವಾಗಿ ನೋಡಿಕೊಳ್ಳುತ್ತಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಪೋರ್ಟಲ್ನಲ್ಲಿ ತೆರಿಗೆದಾರರು ಅನುಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆದಾಯ ತೆರಿಗೆ ಇಲಾಖೆ ಹೊಸ ಇ- ಫೈಲಿಂಗ್ ವೆಬ್ಸೈಟ್ನಲ್ಲಿ ತಾಂತ್ರಿಕ ದೋಷಗಳು ಮುಂದುವರೆದ ಕಾರಣ ಈ ಕುರಿತು ವಿವರಣೆ ನೀಡುವಂತೆ ಇನ್ಫೋಸಿಸ್ ಮುಖ್ಯಸ್ಥ ಸಲೀಲ್ ಪರೇಖ್ಗೆ ನಿನ್ನೆ ಆದಾಯ ತೆರಿಗೆ ಇಲಾಖೆಯಿಂದ ಸಮನ್ಸ್ ನೀಡಲಾಗಿತ್ತು. ಕಳೆದ ಜೂನ್ನಲ್ಲಿ ಆರಂಭವಾದ ಈ ಜಾಲತಾಣದಲ್ಲಿ ಆರಂಭದ ದಿನದಿಂದ ಸಾಕಷ್ಟು ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಈ ಸಂಬಂಧ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಖುದ್ದು ಭೇಟಿಯಾಗಿ ವಿವರಣೆ ನೀಡುವಂತೆ ಹಣಕಾಸು ಸಚಿವಾಲಯ ಸೂಚಿಸಿತು.
ರಾಷ್ಟ್ರೀಯ ಇ ಆಡಳಿತದ ಯೋಜನೆ ಅಡಿ ತೆರಿಗೆದಾರರಿಗೆ ಅನುಕೂಲವಾಗುವ ಹೊಸ ಪೀಚರ್ಗಳ ಮೂಲಕ ಇನ್ಫೋಸಿಸ್ ಈ ಪೋರ್ಟಲ್ ಅಭಿವೃದ್ಧಿ ಪಡಿಸಿತ್ತು. ತೆರಿಗೆದಾರರು ಮತ್ತು ಇತರ ಮಧ್ಯಸ್ಥಗಾರರಿಗೆ ಆದಾಯ ತೆರಿಗೆ ಸಂಬಂಧಿತ ಸೇವೆಗಳಿಗೆ ಒಂದೇ ವೇದಿಕೆ ಒದಗಿಸುವುದು ಈ ಪೋರ್ಟಲ್ನ ಉದ್ದೇಶವಾಗಿದೆ. ಕಳೆದ ಜೂನ್ 7ರಂದು ಈ ಜಾಲತಾಣ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಚಿಕನ್ ಫ್ರೈ ರುಚಿಯಾಗಿ ಮಾಡಿಲ್ಲ ಎಂದು ಸಿಟ್ಟಿನಿಂದ ಪತ್ನಿಯನ್ನೇ ಕೊಂದ ಭೂಪ ಗಂಡ!