Publish Date: Sat, 27 Jul 2019 (12:02 IST)
Updated Date: Sat, 27 Jul 2019 (12:04 IST)
ಛತ್ತೀಸ್ ಗಢ: ಮಣ್ಣಲ್ಲಿ ಕರಗದೆ ಪರಿಸರವನ್ನು ಹಾಳು ಮಾಡುತ್ತಿರುವ ವಸ್ತುವೆಂದರೆ ಅದು ಪ್ಲಾಸ್ಟಿಕ್. ಈ ಪ್ಲಾಸ್ಟಿಕ್ ನಿಂದ ಪರಿಸರವನ್ನು ಮುಕ್ತಗೊಳಿಸಲು ಛತ್ತೀಸ್ ಗಢದ ಅಂಬಿಕಾಪುರ ಮಹಾನಗರ ಪಾಲಿಕೆ ಸ್ವಚ್ಛ ಭಾರತ ಅಭಿಯಾನದಡಿ ಹೊಸದೊಂದು ಯೋಜನೆಯನ್ನು ರೂಪಿಸಿದೆ.
ಹೌದು. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡಲು ಸರ್ಕಾರ ಅನೇಕ ನಿಯಮಗಳನ್ನು ಜಾರಿಗೆ ತಂದರೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಇದೀಗ ಬಳಕೆಯಾದ ಪ್ಲಾಸ್ಟಿಕ್ ನ್ನು ಸಂಗ್ರಹಿಸಲು ಅಂಬಿಕಾಪುರ ಮಹಾನಗರ ಪಾಲಿಕೆ ಪ್ಲಾಸ್ಟಿಕ್ ಚಿಂದಿ ಸಂಗ್ರಹಿಸುವ ನಿರಾಶ್ರತರಿಗೆ ದೇಶದಲ್ಲಿ ಮೊದಲ ಬಾರಿಗೆ 'ಗಾರ್ಬೇಜ್ ಕೆಫೆ' ಎಂಬ ಹೋಟೆಲ್ ನ್ನು ತೆರೆಯಲು ನಿರ್ಧರಿಸಿದೆ.
ಇಲ್ಲಿ ಕಸ ಸಂಗ್ರಹಿಸುವವರು ಒಂದು ಕೆ.ಜಿ. ಪ್ಲಾಸ್ಟಿಕ್ ತಂದುಕೊಟ್ಟರೆ ಊಟ, ಅರ್ಧ ಕೆ.ಜಿ. ಪ್ಲಾಸ್ಟಿಕ್ ತಂದುಕೊಟ್ಟರೆ ಉಪಾಹಾರ ನೀಡಲಾಗುತ್ತದೆ. ಇದರಿಂದ ಊಟಕ್ಕಾಗಿ ಪರದಾಡುವ ನಿರಾಶ್ರಿತರಿಗೆ ಅನುಕೂಲವಾಗುವುದರ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ಒಂದೆಡೆ ಸಂಗ್ರಹವಾಗಲಿದೆ ಎನ್ನಲಾಗಿದೆ.