ದಿಸ್ಪುರ್ : ಸಂಸದ ರಾಹುಲ್ ಗಾಂಧಿ ಮಾಡಿರುವ ಒಂದು ವಿವಾದಾತ್ಮಕ ಟ್ವೀಟ್ ವಿರುದ್ಧ ಅಸ್ಸಾಂನ ವಿವಿಧ ಪೊಲೀಸ್ ಠಾಣೆಗಳಲ್ಲಿ 1,000 ಕ್ಕೂ ಹೆಚ್ಚು ದೂರುಗಳನ್ನು ಬಿಜೆಪಿ ಕಾರ್ಯಕರ್ತರು ದಾಖಲಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಯುವ ಮೋರ್ಚಾದ ಕಾರ್ಯಕರ್ತರು 1,000 ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದ್ದಾರೆ. ಅರುಣಾಚಲ ಪ್ರದೇಶವು ತನ್ನ ಭಾಗವಾಗಿದೆ ಎಂಬ ಚೀನಾದ ಹೇಳಿಕೆಯನ್ನು ರಾಹುಲ್ ಗಾಂಧಿ ಅವರ ಟ್ವೀಟ್ ಒಂದು ಪರೋಕ್ಷವಾಗಿ ಬೆಂಬಲಿಸುತ್ತದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದೇವೆ. ರಾಹುಲ್ ಗಾಂಧಿ ಅವರ ಟ್ವೀಟ್ ಪ್ರತ್ಯೇಕತಾವಾದಿ ಮನಸ್ಥಿತಿಯನ್ನು ವ್ಯಕ್ತಪಡಿಸಿದೆ. ಇದು ಹಳೆಯ ಪಕ್ಷದ ಸಿದ್ಧಾಂತವನ್ನು ಮತ್ತೆ ತೋರಿಸಿದಂತಿದೆ. ಕಾಂಗ್ರೆಸ್ ಪಕ್ಷವು ಭಾರತಕ್ಕೆ ಅಪಾಯ. ರಾಹುಲ್ ಗಾಂಧಿ ಅವರು ಭಾರತದ ದೊಡ್ಡ ಸಮಸ್ಯೆ ಎಂದು ಕಿಡಿಕಾರಿದ್ದಾರೆ.
ಕಳೆದ ವಾರ ರಾಹುಲ್ ಗಾಂಧಿ ನಮ್ಮ ಸಂಸ್ಕೃತಿ, ವೈವಿಧ್ಯತೆ, ಭಾಷೆ, ಜನ, ರಾಜ್ಯಗಳ ನಡುವೆ ಒಂದು ಸಂಬಂಧವಿದೆ. ಅದು ನಮ್ಮ ಹೆಮ್ಮೆ. ಕಾಶ್ಮೀರದಿಂದ ಕೇರಳದವರೆಗೆ ಮತ್ತು ಗುಜರಾತ್ನಿಂದ ಪಶ್ಚಿಮ ಬಂಗಾಳದ ವರೆಗೆ ಭಾರತದ ವೈವಿಧ್ಯತೆ ಹರಡಿದೆ ಎಂದು ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿದ್ದರು.
ಅಸ್ಸಾಂನ ವಿವಿಧ ಪೊಲೀಸ್ ಠಾಣೆಗಳ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಮಹಾ ನಿರ್ದೇಶಕರು, ರಾಜ್ಯದಲ್ಲಿ ಒಟ್ಟು 329 ಪೊಲೀಸ್ ಠಾಣೆಗಳು, 293 ಔಟ್ಪೋಸ್ಟ್ಗಳು ಮತ್ತು 151 ಗಸ್ತು ಠಾಣೆಗಳಿವೆ. ರಾಜ್ಯದಲ್ಲಿರುವ ಹೊರ ಠಾಣೆ ಹಾಗೂ ಗಸ್ತು ಠಾಣೆಗಳಲ್ಲಿ ದೂರು ದಾಖಲಿಸಬಹುದಾದರೂ ಪೊಲೀಸ್ ಠಾಣೆಯಲ್ಲಿ ಮಾತ್ರ ಪ್ರಕರಣ ದಾಖಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.