ಅರವಿಂದ್ ಕೇಜ್ರಿವಾಲ್ ಅವರ ಕೆಲವು ಸಹೋದ್ಯೋಗಿಗಳು ಜೈಲಿಗೆ ಹೋಗಿದ್ದನ್ನು, ಇನ್ನೂ ಕೆಲವರು ವಂಚನೆಯಲ್ಲಿ ತೊಡಗಿದ್ದನ್ನು ನೋಡಿ ತನಗೆ ತುಂಬಾ ವಿಷಾದವೆನಿಸುತ್ತದೆ ಎಂದು ಹೆಸರಾಂತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಂಗಳವಾರ ತಿಳಿಸಿದ್ದು, ಹಜಾರೆ ಅವರ ಹೇಳಿಕೆಯಿಂದ ಕೇಜ್ರಿವಾಲ್ ಅವರನ್ನು ಮತ್ತಷ್ಟು ಮುಜುಗರಕ್ಕೀಡುಮಾಡಿದೆ.
ನನಗೆ ತುಂಬಾ ನೋವಾಗಿದೆ. ಅವರು ನನ್ನ ಜತೆ ಇದ್ದಾಗ ಗ್ರಾಮ್ ಸ್ವರಾಜ್ ಕುರಿತು ಪುಸ್ತಕ ಬರೆದಿದ್ದರು. ಇದನ್ನು ಗ್ರಾಮ್ ಸ್ವರಾಜ್ ಎಂದು ನಾವು ಕರೆಯುತ್ತೇವೆಯೇ ಎಂದು ಹಜಾರೆ ಪ್ರಶ್ನಿಸಿದರು. ಆದ್ದರಿಂದಲೇ ನನಗೆ ದುಃಖವಾಗಿದೆ. ಅವರ ಕಡೆ ಆಶಾಭಾವನೆಯಿಂದ ನೋಡುವುದು ಮುಗಿದಿದೆ ಎಂದು ಹಜಾರೆ ಹೇಳಿದರು.
ಮಹಿಳೆಯೊಬ್ಬರಿಂದ ರೇಪ್ ಆರೋಪಕ್ಕೆ ಗುರಿಯಾದ ಎಎಪಿ ಶಾಸಕ ಸಂದೀಪ್‌ಕುಮಾರ್‌ನನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಅವರ ಪ್ರತಿಕ್ರಿಯೆ ಹೊರಬಿದ್ದಿದೆ.
ತಾವು ಮುಂಚೆ ಕೇಜ್ರಿವಾಲ್ ಅವರಿಗೆ, ನೀವು ಪಕ್ಷಕ್ಕೆ ಚಾಲನೆ ನೀಡಿದ ಬಳಿಕ ಜಗತ್ತನ್ನು ಸುತ್ತುತ್ತೀರಿ, ಪಕ್ಷಕ್ಕಾಗಿ ರಾಲಿಗಳನ್ನು ದೇಶದಲ್ಲಿ ಆಯೋಜಿಸುತ್ತೀರಿ, ಆದರೆ ನಿಮ್ಮ ಪಕ್ಷವನ್ನು ಸೇರಿದ ಜನರಲ್ಲಿ ಉತ್ತಮ ಗುಣನಡತೆ ಇದೆಯೋ ಇಲ್ಲವೋ ಎಂದು ಹೇಗೆ ಪತ್ತೆಹಚ್ಚುತ್ತೀರಿ ಎಂದು ಕೇಳಿದ್ದಾಗಿ ಹೇಳಿದರು.
ಅದಕ್ಕೆ ಕೇಜ್ರಿವಾಲ್ ಅವರಲ್ಲಿ ಉತ್ತರವಿರಲಿಲ್ಲ ಎಂದು ಹಜಾರೆ ನುಡಿದರು. ಅದು ಈಗ ಅನುಭವಕ್ಕೆ ಬರುತ್ತಿದೆ. ಇದಕ್ಕೆ ಮುಂಚೆ ಕೂಡ ನಾನು ಹೇಳಿದ್ದೆ. ಪಕ್ಷದ ನಾಯಕರಾಗಿ ನಿಮ್ಮ ಪಕ್ಷವನ್ನು ಸೇರುವವರು ಶುದ್ಧ ಚಾರಿತ್ರ್ಯ ಹೊಂದಿದ್ದಾರೋ ಇಲ್ಲವೋ ಪರೀಕ್ಷಿಸುವುದು ಅಗತ್ಯ ಎಂದು ಹಜಾರೆ ನುಡಿದರು.