ಹೈದರಾಬಾದ್: ಕರ್ನಾಟಕ ಗ್ಯಾರಂಟಿಯಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಸರ್ಕಾರ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದೆ. ಆದರೆ ಇದರಿಂದ ಈಗ ನೌಕರರಿಗೆ ಸಂಬಳ ಕೊಡಲೂ ಹಣವಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ ಕೈ ಚೆಲ್ಲಿ ಕೂತಿದ್ದಾರೆ.
ಕರ್ನಾಟಕದ ಬಳಿಕ ಎಲ್ಲಾ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಉಚಿತ ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಂತೆ ತೆಲಂಗಾಣದಲ್ಲೂ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದೆ.
ಆದರೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಈಗ ಸಿಎಂ ರೇವಂತ್ ರೆಡ್ಡಿಗೆ ಅದರ ಬಿಸಿ ಅರಿವಾಗತೊಡಗಿದೆ. ಗ್ಯಾರಂಟಿ ಯೋಜನೆಗಳಿಗಾಗಿಯೇ ರಾಜ್ಯದ ಬಹುಪಾಲು ಹಣ ಪೋಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಸಾಕಾಗುತ್ತಿಲ್ಲ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದೀಗ ಮತ್ತೆ ಅದೇ ಮಾತು ಪುನರುಚ್ಚರಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಇದರಿಂದ ಸರ್ಕಾರೀ ನೌಕರರಿಗೆ ವೇತನ ಪಾವತಿಸಲೂ ಸಾಧ್ಯವಾಗುತ್ತಿಲ್ಲ. ಆರ್ ಬಿಐನಿಂದ 4,000 ಕೋಟಿ ರೂ. ಸಾಲವನ್ನು ಕೋರಲಾಗಿದೆ. ಹಣಕಾಸಿನ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಸಂಬಳ ಮತ್ತು ಪಿಂಚಣಿ ಪಾವತಿಸುವ ಬಗ್ಗೆ ನಿರ್ಧರಿಸಲು ಸರ್ಕಾರೀ ನೌಕರರನ್ನು ಕೇಳಿಕೊಂಡಿದ್ದೇವೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.