ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕ್ ವಿರುದ್ಧ ಭಾರತಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿದ್ದಕ್ಕಾಗಿ ಕೇಂದ್ರ ಸರ್ಕಾರ ಮತ್ತು ಸಶಸ್ತ್ರ ಪಡೆಗಳಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಪಹಲ್ಗಾಮ್ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಮತ್ತು ಇಡೀ ದೇಶಕ್ಕೆ ನ್ಯಾಯ ಒದಗಿಸಲು ತೆಗೆದುಕೊಳ್ಳಲಾದ ಈ ಕ್ರಮವು ಇಡೀ ದೇಶದ ಸ್ವಾಭಿಮಾನ ಮತ್ತು ಧೈರ್ಯವನ್ನು ಹೆಚ್ಚಿಸಿದೆ ಎಂದು ಭಾಗವತ್ ತಿಳಿಸಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ತೆಗೆದುಕೊಳ್ಳುತ್ತಿರುವ ಮಿಲಿಟರಿ ಕ್ರಮವು ದೇಶದ ಭದ್ರತೆಗೆ ಅಗತ್ಯ ಮತ್ತು ಅನಿವಾರ್ಯ ಹೆಜ್ಜೆಯಾಗಿದೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಮಯದಲ್ಲಿ ಇಡೀ ದೇಶವು ಸರ್ಕಾರ ಮತ್ತು ಸಶಸ್ತ್ರ ಪಡೆಗಳೊಂದಿಗೆ ಮುಕ್ತ ಮನಸ್ಸಿನಿಂದ ನಿಂತಿದೆ ಎಂದು ಭಾಗವತ್ ತಿಳಿಸಿದ್ದಾರೆ.
ಈ ಕಷ್ಟದ ಸಮಯದಲ್ಲಿ ಸರ್ಕಾರ ಹೊರಡಿಸುವ ಆದೇಶಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ಎಲ್ಲಾ ನಾಗರಿಕರು ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸಲು ಮತ್ತು ಅಗತ್ಯವಿರುವಲ್ಲಿ ಸೈನ್ಯ ಮತ್ತು ಆಡಳಿತದೊಂದಿಗೆ ಸಹಕರಿಸಲು ಸಿದ್ಧರಾಗಿರಬೇಕು ಎಂದು ಭಾಗವತ್ ಮನವಿ ಮಾಡಿದ್ದಾರೆ.