ಗೋವಾ: ಇಲ್ಲಿನ ಶಿರ್ಗಾಂವ್ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದ್ದು 6 ಭಕ್ತರು ಸಾವನ್ನಪ್ಪಿದ್ದಾರೆ ಮತ್ತು 15 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಗೋವಾದ ಶಿರ್ಗಾಂವ್ ದೇವಸ್ಥಾನದಲ್ಲಿ ನಿನ್ನೆಯಿಂದ ಜಾತ್ರೆ ಆರಂಭವಾಗಿದೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದಾರೆ. ಸಿಎಂ ಪ್ರಮೋದ್ ಸಾವಂತ್ ಕೂಡಾ ಪತ್ನಿ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ಅತಿಯಾದ ಜನಸಂದಣಿಯಿದ್ದರೂ ಅದಕ್ಕೆ ತಕ್ಕ ವ್ಯವಸ್ಥೆಯಿರಲಿಲ್ಲ ಎನ್ನಲಾಗಿದೆ. ಜನಸಂಖ್ಯೆ ಹೆಚ್ಚಾದಾಗ ಹೊರಬರಲು ಜನ ಪರದಾಡುವಂತಾಯಿತು. ಹೀಗಾಗಿಯೇ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ.
ಘಟನೆ ನಡೆದ ತಕ್ಷಣವೇ ಪೊಲೀಸರು, ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕಾಲ್ತುಳಿತಕ್ಕೆ ನಿಖರ ಕಾರಣವೇನೆಂದು ಪೊಲೀಸರು ತನಿಖೆ ನಡೆಸಲಿದ್ದಾರೆ.