ಉಜ್ಜೈನಿ: ಹೋಳಿ ಹಬ್ಬದ ದಿನವೇ ಉಜ್ಜೈನಿ ಮಹಾಕಾಳೇಶ್ವರ ದೇವಾಲಯದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 13 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೋಳಿ ಹಬ್ಬದ ಅಂಗವಾಗಿ ದೇವಾಲಯದ ಗರ್ಭಗುಡಿಯಲ್ಲಿ ಭಸ್ಮಾರತಿ ಸೇವೆ ನೆರವೇರಿಸಲಾಗುತ್ತಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಐವರು ಅರ್ಚಕರು ಮತ್ತು ನಾಲ್ವರು ಭಕ್ತರು ಸೇರಿದಂತೆ 13 ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಹೋಳಿ ಹಬ್ಬದ ದಿನವೇ ಇಂತಹದ್ದೊಂದು ದುರ್ಘಟನೆ ನಡೆದಿರುವುದು ವಿಪರ್ಯಾಸ. ಭಸ್ಮ ಆರತಿ ವೇಳೆ ಮಹಾಕಾಳನಿಗೆ ಗುಲಾಲ್ ಅರ್ಪಿಸಲಾಗುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷವೆಂದರೆ ಈ ಸಂದರ್ಭದಲ್ಲಿ ಸಿಎಂ ಮೋಹನ್ ಯಾದವ್ ಕುಟುಂಬಸ್ಥರೂ ದೇವಾಲಯದಲ್ಲಿದ್ದರು. ಇಂದು ಹೋಳಿ ನಿಮಿತ್ತ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬಂದಿದ್ದರು. ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.