Publish Date: Mon, 25 Mar 2024 (10:20 IST)
Updated Date: Mon, 25 Mar 2024 (10:27 IST)
ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೆಲವು ಅಚ್ಚರಿಯ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಆ ಪೈಕಿ ಸಾಕ್ಷಾತ್ ಶ್ರೀರಾಮಚಂದ್ರನೂ ಸೇರಿದ್ದಾನೆ!
ಈ ಶ್ರೀರಾಮ ಚಂದ್ರ ಬೇರೆ ಯಾರೂ ಅಲ್ಲ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡುತ್ತಿದ್ದ ಅರುಣ್ ಗೋವಿಲ್. ರಾಮಾಯಣ ಧಾರವಾಹಿ ವೀಕ್ಷಿಸುತ್ತಿದ್ದ ಎಷ್ಟೋ ಮಂದಿ ಅರುಣ್ ಅವರಲ್ಲೇ ಶ್ರೀರಾಮನನ್ನು ಕಾಣುತ್ತಿದ್ದರು.
ಅದಕ್ಕೆ ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಅವರಿಗೆ ಸಿಕ್ಕ ಅಭೂತಪೂರ್ವ ಸ್ವಾಗತವೇ ಸಾಕ್ಷಿ. ಅರುಣ್ ಗೋವಿಲ್ ಅಯೋಧ‍್ಯೆಗೆ ಬಂದಾಗ ಜನ ಅವರಿಗೆ ನಿಜವಾಗಿಯೂ ರಾಮನೇ ಬಂದನೇನೋ ಎಂಬಂತೆ ಪುಷ್ಪ ಮಳೆ ಸುರಿಸಿ ಸ್ವಾಗತ ಕೋರಿದ್ದರು.
ಇದೀಗ ಅದೇ ಅರುಣ್ ಗೋವಿಲ್ ಗೆ ಬಿಜೆಪಿ ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಹಲವು ಪಾತ್ರ ಮಾಡಿ ಮಿಂಚಿದ್ದ ಅರುಣ್ ಗೋವಿಲ್ ಇತ್ತೀಚೆಗೆ ಆರ್ಟಿಕಲ್ 370 ಸಿನಿಮಾದಲ್ಲಿ ಪ್ರಧಾನಿ ಮೋದಿ ಪಾತ್ರ ಮಾಡಿದ್ದರು. ಇದೀಗ ಬಿಜೆಪಿಯಿಂದಲೇ ಚುನಾವಣೆಗೆ ಸ್ಪರ್ದಿಸುತ್ತಿರುವುದು ವಿಶೇಷ.