ವಿಜಯಪುರ : ಡಿಕೆಶಿ ಹಾಗೂ ಸಿದ್ದರಾಮಯ್ಯನವರಿಗೆ ಹೇಳಿಕೊಳ್ಳಲು ವಿಷಯವಿಲ್ಲ. ಹಾಗಾಗಿ ಅವರು ಇಂತಹ ಪ್ರಚೋದನೆ ಕೆಲಸ ಮಾಡುತ್ತಿದ್ದಾರೆ. ಇಂತಹದ್ದನ್ನೆಲ್ಲಾ ಅವರು ಬಿಡಬೇಕು ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಯಡಿಯೂರಪ್ಪನವರ ಮನೆ ಮೇಲೆ ಕಲ್ಲುತೂರಾಟ ವಿಚಾರವಾಗಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಇಂತಹ ಯೋಜನೆಗಳನ್ನು ಯಾಕೆ ಮಾಡಲಿಲ್ಲ? ಅವರ ಪ್ರಣಾಳಿಕೆಯಲ್ಲಿ ಇದು ಇತ್ತು.
ಅವರೇ ಯಾಕೆ ಮಾಡಲಿಲ್ಲ? ನಾವು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ಕೊಟ್ಟಿದ್ದೇವೆ. ನಮ್ಮ ಸರ್ಕಾರದ ಬಾಗಿಲು ಓಪನ್ ಇದೆ. ಯಾರ ಪ್ರಚೋದನೆಗೂ ಒಳಗಾಗದೆ ಸಿಎಂ ಜೊತೆ ಚರ್ಚೆ ಮಾಡಿ ಎಂದರು.
ನಾಳೆಯೇ ಸಿಎಂ ಅವರನ್ನು ಕರೆಸಿ ವಿಜಯಪುರದ ವಿಮಾನ ನಿಲ್ದಾಣ ಟರ್ಮಿನಲ್ ಬಿಲ್ಡಿಂಗ್ ಓಪನ್ ಮಾಡಬೇಕು ಎಂದುಕೊಂಡಿದ್ದೆವು. ವಿಮಾನ ಕಂಪನಿ ಮಾಲೀಕರ ಒಪ್ಪಂದ ಕಾರ್ಯಕ್ಕೂ ಅನುಕೂಲ ಅಗಿತ್ತು. ಸಿಎಂ ಅವರು ಕೂಡಾ ಬರುತ್ತೇನೆ ಎಂದು ಒಪ್ಪಿಕೊಂಡಿದ್ದರು. ಆದರೆ ಇಂದು ನೀತಿ ಸಂಹಿತೆ ಜಾರಿಯಾದರೆ ಉದ್ಘಾಟನೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.