Publish Date: Mon, 27 Mar 2023 (11:14 IST)
Updated Date: Mon, 27 Mar 2023 (10:15 IST)
ಮಂಡ್ಯ : ಮಾಜಿ ಸಿಎಂ ಸಿದ್ದರಾಮಯ್ಯ ಚಿಕ್ಕಮ್ಮತಾಯಿ ಹೇಳಿದಂತೆ ಎರಡು ಕ್ಷೇತ್ರದಲ್ಲಿ ನಿಲ್ಲಲು ಮುಂದಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮ ಆದಿನಾಡು ಚಿಕ್ಕಮ್ಮತಾಯಿ ಈ ಹಿಂದೆ ಸಿದ್ದರಾಮಯ್ಯಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ನುಡಿದಿತ್ತು. ದೇವಿಯ ಮಾತಿಗೋ ಅಥವಾ ರಾಜಕೀಯ ಕಾರಣಕ್ಕೋ ಗೊತ್ತಿಲ್ಲ ಈಗ ಸಿದ್ದರಾಮಯ್ಯ ಎರಡು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಜನವರಿ ತಿಂಗಳಿನಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಆದಿನಾಡು ಚಿಕ್ಕಮ್ಮತಾಯಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಅರ್ಚಕ ಲಿಂಗಣ್ಣ ಮೈ ಮೇಲೆ ಚಿಕ್ಕಮ್ಮತಾಯಿ ಬಂದು ಸಿದ್ದರಾಮಯ್ಯ ಸ್ಪರ್ಧೆಯ ವಿಚಾರವಾಗಿ ಮಾತನಾಡಿತ್ತು.
ನಾನು ನಿಮ್ಮ ಮನೆಯ ಮೂಲ ದೇವರು. ನಿಮ್ಮ ತಂದೆ ಒಂದು ಕಡೆ ಸ್ಪರ್ಧೆ ಮಾಡಿದರೆ ಕೆಡುಕು ಆಗುತ್ತದೆ. ಎರಡು ಕಡೆ ಸ್ಪರ್ಧೆ ಮಾಡಿದರೆ ಒಳ್ಳೆಯದು. ಎರಡು ಬಾಹುಗಳನ್ನು ಎರಡು ಕಡೆ ಚಾಚಿದರೆ ನಾನು ಒಳ್ಳೆಯದು ಮಾಡುತ್ತೇನೆ ಎಂದು ನುಡಿದಿತ್ತು.
ಕಾಂಗ್ರೆಸ್ ಟಿಕೆಟ್ ಪಟ್ಟಿ ಶನಿವಾರ ಪ್ರಕಟವಾಗಿದ್ದು ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದ ಟಿಕೆಟ್ ನೀಡಿದೆ. ಆದರೆ ಸಿದ್ದರಾಮಯ್ಯ ಅವರು ನಾನು ಎರಡು ಕಡೆ ಸ್ಪರ್ಧೆ ಮಾಡುವಂತೆ ಕುಟುಂಬಸ್ಥರು ಹೇಳುತ್ತಿದ್ದಾರೆ. ಹೀಗಾಗಿ ನಾನು ಕೋಲಾರದಲ್ಲೂ ಟಿಕೆಟ್ ಕೇಳಿದ್ದೇನೆ ಎಂದು ಹೇಳಿದ್ದಾರೆ.