Publish Date: Sun, 08 Nov 2026 (22:23 IST)
Updated Date: Sun, 08 Nov 2026 (22:27 IST)
ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದೆ. ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರುವ ಸಂದರ್ಭದಲ್ಲಿ ಅವರು, "ದೀಪಾವಳಿ ಹಬ್ಬವು ಖುಷಿಯ ಈದ್ ಹಬ್ಬವಿದ್ದಂತೆ" ಎಂದು ಹೇಳಿರುವುದು ಈಗ ಟ್ರೋಲ್‌ಗೆ ಕಾರಣವಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಾ ದೀಪಾವಳಿ ಹಬ್ಬದ ಮಹತ್ವವನ್ನು ವಿವರಿಸಿದ ಖರ್ಗೆ, ನಮ್ಮ ದೇಶದಲ್ಲಿ ಎಲ್ಲರೂ ದೀಪಾವಳಿಯನ್ನು ಆಚರಿಸುತ್ತಾರೆ ಮತ್ತು ಇದರ ಮುಖ್ಯ ಕಾರಣ ಇದು ಖುಷಿಯ ಈದ್ ಹಬ್ಬದಂತೆ ಸುದೀರ್ಘ ಕಾಲ ಆಚರಿಸುವ ಹಬ್ಬವಾಗಿದೆ ಎಂದು ತಿಳಿಸಿದ್ದರು. ಹಿಂದೂಗಳ ಅತ್ಯಂತ ಪವಿತ್ರ ಹಾಗೂ ಪ್ರಮುಖ ಹಬ್ಬವಾದ ದೀಪಾವಳಿಯನ್ನು ಇಸ್ಲಾಮಿಕ್ ಹಬ್ಬವಾದ 'ಈದ್' ಜತೆಗೆ ಹೋಲಿಕೆ ಮಾಡಿರುವುದು ಹಾಗೂ ದೀಪಾವಳಿಯನ್ನು 'ಖುಷಿಯ ಈದ್' ಎಂದು ಕರೆದಿರುವುದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷವು ಸದಾಕಾಲ ಮುಸ್ಲಿಂ ಒಲೈಕೆ ರಾಜಕಾರಣದಲ್ಲಿ ತೊಡಗಿದೆ ಎಂದು ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡರು, ಸನಾತನ ಧರ್ಮದ ಹಬ್ಬಗಳ ಸಂದರ್ಭದಲ್ಲೂ ಇಂತಹ ಹೇಳಿಕೆಗಳನ್ನು ನೀಡುವುದು ಹಿಂದೂ ಸಂಪ್ರದಾಯಗಳಿಗೆ ಮಾಡುವ ಅವಮಾನ ಎಂದು ಕಿಡಿಕಾರಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಗರು ಕೂಡ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಹಬ್ಬಗಳ ಹೆಸರನ್ನು ತಿದ್ದಿ ಮಾತನಾಡುವುದೇಕೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಬಂದ ಈ ಹೇಳಿಕೆ ಈಗ ರಾಜಕೀಯವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ