ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿ ವಿವಿಯಿಂದ ಪದವಿ ಪಡೆದಿರುವ ವಿಷಯ ಈಗ ವಿವಾದದ ಸ್ವರೂಪಕ್ಕೆ ತಿರುಗಿದ್ದು, ಪ್ರಧಾನಿ ಸುಳ್ಳು ಹೇಳಿದ್ದಾರೆಂದು ಸಾಬೀತು ಮಾಡಲು ತಮ್ಮ ಬಳಿ ಹೊಸ ದಾಖಲೆಗಳಿವೆ ಎಂದು ಆಮ್ ಆದ್ಮಿ ಪಕ್ಷ ಪ್ರತಿಪಾದಿಸಿದೆ. ಇತ್ತೀಚೆಗೆ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾದ ಡಿಗ್ರಿ ನಕಲಿಯಾಗಿದೆ ಎಂದೂ ಅದು ತಿಳಿಸಿದೆ.
ಅರವಿಂದ ಕೇಜ್ರಿವಾಲ್ ನಿನ್ನೆ ದೆಹಲಿ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು, ಪ್ರಧಾನಿ ಮೋದಿ ಡಿಗ್ರಿಯ ವಿವರಗಳನ್ನು ಅದರ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆಯೂ ಮತ್ತು ಡಿಗ್ರಿ ದಾಖಲೆಗಳು ಸುರಕ್ಷಿತವಾಗಿರುವಂತೆ ಖಾತ್ರಿ ಮಾಡುವಂತೆಯೂ ತಿಳಿಸಿದ್ದರು.
ಇಂತಹ ದಾಖಲೆಗಳು ಅಸ್ತಿತ್ವದಲ್ಲೇ ಇಲ್ಲ. ನರೇಂದ್ರ ದಾಮೋದರ್ ಮೋದಿ 1978ರಲ್ಲಿ ವಿವಿಯ ಪದವಿ ಪಡೆದಿಲ್ಲ ಎಂದು ಎಎಪಿ ಆರೋಪಿಸಿದೆ. ಅವರ ಡಿಗ್ರಿ ನಕಲಿಯಾಗಿದ್ದು, ಅವರು ಪರೀಕ್ಷೆಯನ್ನು ತೆಗೆದುಕೊಂಡೇ ಇಲ್ಲ ಎಂದು ಎಎಪಿಯ ಅಶುತೋಷ್ ಆರೋಪಿಸಿದರು.
ಪ್ರಧಾನಿ ಮೋದಿ ಪದವಿ ಪಡೆದ ದಿನಾಂಕದಲ್ಲೇ ಉತ್ತೀರ್ಣರಾಗಿರುವ ನರೇಂದ್ರ ಮಹಾವೀರ್ ಮೋದಿ ಎಂಬವರ ಡಿಗ್ರಿ ಪ್ರಮಾಣಪತ್ರವನ್ನು ತಾನು ಪತ್ತೆಹಚ್ಚಿರುವುದಾಗಿ ಎಎಪಿ ತಿಳಿಸಿದೆ. ನರೇಂದ್ರ ಮಹಾವೀರ್ ಮೋದಿ ರಾಜಸ್ಥಾನದ ಆಳ್ವಾರ್‌ಗೆ ಸೇರಿದ್ದು, ಪ್ರಧಾನಿ ಮೋದಿ ಗುಜರಾತಿನ ವಡಾನಗರದವರು ಎಂದು ಅವರ ಶಾಲೆಯ ಪ್ರಮಾಣ ಪತ್ರ ಉಲ್ಲೇಖಿಸಿ ಎಎಪಿ ತಿಳಿಸಿದೆ.