ನವದೆಹಲಿ: ಅರವಿಂದ್ ಕೇಜ್ರಿವಾಲ್ ಬಳಿಕ ದೆಹಲಿ ಸಿಎಂ ಗದ್ದುಗೆಗೇರಿ ದಾಖಲೆ ಮಾಡಿದ ಅತಿಶಿ ಮಾರ್ಲೆನಾ ಅಧಿಕಾರ ಸ್ವೀಕರಿಸಿ ಒಂದೇ ದಿನದಲ್ಲಿ ಅವರ ಮೇಲೆ ಆರೋಪವೊಂದು ಕೇಳಿಬಂದಿದೆ. ಅತಿಶಿಗೆ ಉಗ್ರ ಅಫ್ಜಲ್ ಗುರು ಜೊತೆ ಲಿಂಕ್ ಇತ್ತು ಎಂದು ಹೊಸ ಆರೋಪ ಕೇಳಿಬಂದಿದೆ.
ಈ ಬಗ್ಗೆ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿ ಸಿಎಂ ಅತಿಶಿ ತಂದೆ ವಿಜಯ್ ಸಿಂಗ್ ವಿರುದ್ಧ ಸ್ವಾತಿ ಮಲಿವಾಲ್ ಉಗ್ರ ಅಫ್ಜಲ್ ಗುರು ಸಮರ್ಥಿಸಿಕೊಂಡ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಅಫ್ಜಲ್ ಗುರು ಯಾರು ಎಂದು ನಿಮಗೆ ಗೊತ್ತಿರಬಹುದು.
ಸಂಸತ್ ಮೇಲೆ ದಾಳಿ ನಡೆಸಿದ ಪ್ರಮುಖ ಉಗ್ರ ಅಫ್ಜಲ್ ಗುರು. ಈತನಿಗೆ ಮರಣದಂಡನೆ ಶಿಕ್ಷೆ ನೀಡಲಾಗಿತ್ತು. ಆದರೆ ಈತನ ಪರವಾಗಿ ಅತಿಶಿ ತಂದೆ ವಿಜಯ್ ಸಿಂಗ್ ಸಮರ್ಥನೆ ಮಾಡಿಕೊಂಡಿದ್ದರು. ಅಫ್ಜಲ್ ಗುರುಗೆ ಮರಣದಂಡನೆ ಸಿಗಬಾರದು ಎಂದು ಅತಿಶಿ ಕುಟುಂಬ ಹೋರಾಟ ಮಾಡಿತ್ತು ಎಂಬುದು ಸ್ವಾತಿ ಮಲಿವಾಲ್ ಆರೋಪ.
ಅತಿಶಿ ತಂದೆ ವಿಜಯ್ ಸಿಂಗ್ ಪಂಜಾಬ್ ಮೂಲದವರಾಗಿದ್ದು, ದೆಹಲಿಯ ವಿವಿಯೊಂದರ ಪ್ರೊಫೆಸರ್ ಆಗಿದ್ದರು. ಅತಿಶಿ ತಾಯಿ ಕೂಡಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇಬ್ಬರೂ ಎಡಪಂಥೀಯ ಧೋರಣೆ ಹೊಂದಿದ್ದರು. ಅತಿಶಿಗೆ ಸರ್ ನೇಮ್ ಆಗಿ ಮಾರ್ಲೆನಾ ಎಂದು ಹೆಸರಿಡಲೂ ಅವರ ಪೋಷಕರಿಗೆ ಎಡಪಂಥೀಯ ನಾಯಕ ಕಾರ್ಲ್ ಮಾರ್ಕ್ಸ್ ಮತ್ತು ವ್ಲಾಡಿಮಿರ್ ಲೆನಿನ್ ಮೇಲಿನ ಪ್ರೀತಿಯಾಗಿತ್ತು ಎಂದು ಸ್ವಾತಿ ಹೇಳಿದ್ದಾರೆ. ಇದೀಗ ಸ್ವಾತಿ ಮಲಿವಾಲ್ ಮಾಡಿರುವ ಆರೋಪಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.