ನವದೆಹಲಿ: ತಮ್ಮ ವಿರುದ್ಧ ಅಬಕಾರಿ ಅಕ್ರಮ ಹಗರಣದಲ್ಲಿ ಜೈಲು ವಾಸ ಅನುಭವಿಸಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿಯಾಗಲಿದ್ದು, ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಎರಡೂವರೆ ತಿಂಗಳು ಜೈಲಿನಲ್ಲಿದ್ದರೂ ಕೇಜ್ರಿವಾಲ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಿರಲಿಲ್ಲ. ಈ ಬಗ್ಗೆ ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಇದೀಗ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ ಸಿಎಂ ಕಚೇರಿ ಪ್ರವೇಶಿಸುವಂತಿಲ್ಲ ಮತ್ತು ಯಾವುದೇ ಕಡತಗಳಿಗೆ ಸಹಿ ಹಾಕುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ.
ಜೈಲಿನಿಂದ ಹೊರಬಂದ ತಕ್ಷಣವೇ ಕೇಜ್ರಿವಾಲ್ ಎರಡು ದಿನಗಳೊಳಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದರು. ಆದರೆ ಅವರು ಸುಮ್ಮನೇ ರಾಜೀನಾಮೆ ನೀಡುತ್ತಿಲ್ಲ. ತಮ್ಮ ನಂತರ ದೆಹಲಿ ಸಿಎಂ ಆಗಿ ತಮ್ಮ ಆಪ್ತರನ್ನೇ ನೇಮಿಸಿ ನಿಯಂತ್ರಣ ತಮ್ಮಲ್ಲೇ ಇರುವಂತೆ ನೋಡಿಕೊಳ್ಳಲಿದ್ದಾರೆ. ರಾಜೀನಾಮೆ ನೀಡಿ ಜನರ ಅನುಕಂಪ ಪಡೆಯುವ ಲೆಕ್ಕಾಚಾರವೂ ಅವರಿಗಿರಬಹುದು.
ಇಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಂದಿನ ಮುಖ್ಯಮಂತ್ರಿ ಯಾರು ಎಂದು ಘೋಷಣೆಯಾಗಬಹುದು. ಮೂಲಗಳ ಪ್ರಕಾರ ಕೇಜ್ರಿವಾಲ್ ತಮ್ಮ ಪತ್ನಿ ಸುನಿತಾ ಅಥವಾ ತಮ್ಮ ಪರಮಾಪ್ತೆ, ಸಚಿವೆ ಅತಿಶಿಗೆ ಪಟ್ಟ ಕಟ್ಟುವ ಸಾಧ್ಯತೆಯಿದೆ. ಇಬ್ಬರಲ್ಲಿ ಯಾರಿಗೇ ಅಧಿಕಾರ ನೀಡಿದರೂ ಸರ್ಕಾರದ ಮೇಲೆ ಅವರ ಹಿಡಿತವಿರಲಿದೆ. ಕೇಜ್ರಿವಾಲ್ ಜೈಲಿನಲ್ಲಿದ್ದಾಗ ಸುನಿತಾ ಅವರ ಪರವಾಗಿ ಆಗಾಗ ಮಾಧ್ಯಮಗಳ ಮುಂದೆ ಮಾತನಾಡಿದ್ದು ಇದೆ. ಇನ್ನೊಂದೆಡೆ ಅತಿಶಿ ದೆಹಲಿ ಸರ್ಕಾರವನ್ನು ಚಲಾಯಿಸಿದ್ದರು. ಹೀಗಾಗಿ ದೆಹಲಿಗೆ ಮುಂದೆ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ.